|| ಹರಿ ಸ್ತುತಿ ||
ಎನ್ನಂಥ ಭಕ್ತರು ಅನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ
ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ
ಭಿನ್ನೈಪೆ ನಿನ್ನ ಸಲಹೆಂದು || ಪ ||
ಪತಿತ ನಾನಾದರೂ ಪತಿತ ಪಾವನ
ನೀನು ರತಿನಾಥ ಜನಕ ನಗಪಾಣಿ
ರತಿನಾಥ ಜನಕ ನಗಪಾಣಿ ನೀನಿರಲು
ಇತರ ಚಿಂತ್ಯಾಕೊ ಎನಗಿನ್ನು || 1 ||
ಮನಗೊಳಗೆ ನೀನಿದ್ದು ಮನವೆಂದೆನಿಸಿಕೊಂಡು
ಮನದ ವೃತಿಗಳನ್ನ ಸೃಜಿಸುವಿ
ಮನದ ವೃತ್ತಿಗಳನ್ನ ಸೃಜಿಸುವಿ ಸಂಕರ್ಷಣನೆ
ನಿನ್ನ ಕರುಣಕ್ಕೆ ಎಣೆಗಾಣೆ || 2 ||
ನಾನಾ ಪದಾರ್ಥದೊಳು ನಾನಾ ಪ್ರಕಾರದಲ್ಲಿ
ನೀನಿದ್ದು ಜಗವ ನಡೆಸುವಿ
ನೀನಿದ್ದು ಜಗವ ನಡೆಸುವಿ ಹರಿ ನೀನೆ
ನಾನೆಂಬೋ ನನಗೆ ಗತಿಯುಂಟೆ || 3 ||
ಎನ್ನಪ್ಪ ಎನ್ನಮ್ಮ ಎನ್ನಯ್ಯ ಎನ್ನಣ್ಣ
ಎನ್ನರಸ ಎನ್ನ ಕುಲದೈವ
ಎನ್ನರಸ ಎನ್ನ ಕುಲದೈವ ಇಹಪರದಿ ಎನ್ನ
ಬಿಟ್ಟಗಲದೇ ಇರು ಕಂಡ್ಯ || 4 ||
ಏಸೇಸು ಜನ್ಮದಲಿ ದಾಸನಾ ನಿನಗಯ್ಯ
ಈಶ ನೀನೆಂಬೋ ನುಡಿಸಿದ್ಧ
ಈಶ ನೀನೆಂಬೋ ನುಡಿಸಿದ್ಧ ವಾಗಿರಲು
ದಾಸೀನ ಮಾಡಲುಚಿತಲ್ಲ || 5 ||
ಆಶೆಯೊಂದುಂಟು ಸರ್ವೇಶಾ ವಿಜ್ಞಾಪಿಸುವೆ
ವಿಶ್ವಂಭರಾಭಾಗ್ಯ ಸತಿಮೋಹ
ವಿಶ್ವಂಭರಾಭಾಗ್ಯ ಸತಿಮೋಹ ತಪ್ಪಿಸಿ
ನೀ ಸಲಹಬೇಕೋ ದಯದಿಂದ || 6 ||
ಅನಾಥ ಬಂಧು ಜಗನ್ನಾಥ ವಿಠ್ಠಲ
ಪ್ರಪನ್ನ ಪರಿಪಾಲ ಮಾಲೋಲ
ಪ್ರಪನ್ನ ಪರಿಪಾಲ ಮಾಲೋಲ ಅರಿ
ಪಾಂಚಜನ್ಯ ಧೃತಪಾಣಿ ಸಲಹೆಮ್ಮ || 7 ||
0 ಕಾಮೆಂಟ್‌ಗಳು