|| ಹನುಮ ಸ್ತುತಿ ||
||ಅವಧೂತ ಸದ್ಗುರು ಶ್ರೀ ಬಿಂದುಮಾಧವ ಸ್ವಾಮಿಗಳ ವಿರಚಿತ||
ರಾಗ :- ಬೇಹಾಗ್
ತಾಳ :- ಆದಿ
|| ಏನು ಮಾಡ್ತಾನೋ ಹನುಮ | ಏನು ಮಾಡ್ತಾನೋ ||
ಏನೂ ಇಲ್ಲ | ಎಂತೂ ಇಲ್ಲ | ಹೇಗೆ ಮಾಡ್ತಾನೋ | ಹನುಮ
|| ಏನು ಮಾಡ್ತಾನೋ ||
1. || ಮುಂದೆ ನಡೆವಾ ಕಾರ್ಯವೆಲ್ಲಾ | ಬಿಡಿಸಿ ಹೇಳ್ತಾನೆ |
ಆಗು ಹೋಗುಗಳನ್ನೆಲ್ಲಾ ಬಯಲು ಮಾಡ್ತಾನೆ ||
ಚೀಲಗಟ್ಲೆ ಅಕ್ಕಿಯನ್ನು ತಂದು ಹಾಕ್ತಾನೆ |
ಲಾಟುಗಟ್ಲೆ ಬೆಲ್ಲವನ್ನು ತಂದು ಸುರಿತಾನೆ ||
|| ಏನು ಮಾಡ್ತಾನೊ ||
2. || ಭಕ್ತರ ಕನಸಿನಲ್ಲಿ ಬಂದು | ಏನೋ ಹೇಳ್ತಾನೆ |
ಮಂದ ಬುದ್ಧಿಯನ್ನು ಬಿಡಿಸಿ | ಮುಂದೆ ನಿಲ್ಲುತ್ತಾನೆ ||
ನೂರುಗಟ್ಲೆ ಕಾಯಿಯನ್ನು | ಒಡೆಸುತ್ತಾನೆ |
ಗೊನೆಗಟ್ಲೆ ಬಾಳೆಹಣ್ಣು ತಿನ್ನುತ್ತಾನೆ ||
|| ಏನು ಮಾಡ್ತಾನೊ ||
3. || ಕೊಡಗಟ್ಲೆ ಪಾನಕವನ್ನು | ಕುಡಿಯುತ್ತಾನೆ |
ಕಲ್ಲು ಮುಳ್ಳು ಎನ್ನದಂತೆ ಹೊರಳುತ್ತಾನೆ ||
ಮನೆಮನೆಯನ್ನು ತಿರುಗಿ ಮತ್ತೆ ಬರುತ್ತಾನೆ |
ಕೈಯಾ ತುಂಬಾ ಅನ್ನವನ್ನು ನೀಡುತ್ತಾನೆ ||
|| ಏನು ಮಾಡ್ತಾನೊ ||
4. || ಲೆಕ್ಕವಿಲ್ಲದ ಕರ್ಪೂರ ಹಚ್ಚುತ್ತಾನೆ |
ಭಕ್ತರ ಕೈಯಲ್ಲಿ ರೊಕ್ಕವನ್ನು ತೆಗೆಸುತ್ತಾನೆ ||
ಸೇರುಗಟ್ಲೆ ಕುಂಕುಮವನ್ನು ಚೆಲ್ಲುತ್ತಾನೆ |
ಶಾಂತಿ ಮಾಡಿ ಮಂಡ್ಲ ಹಾಕಿ ನಿಲ್ಲುತ್ತಾನೆ ||
|| ಏನು ಮಾಡ್ತಾನೊ ||
5. || ನಾನಿಹೆನೆಂದು ಎದೆಯನ್ನು ತಟ್ಟುತ್ತಾನೆ |
ತಟ್ಟೆ ತುಂಬ ಹಣ್ಣುಕಾಯಿ ತರಿಸುತ್ತಾನೆ ||
ರಾಮರ ಭಜನೆ ಮಾಡಿರೆಂದು ಹೇಳುತ್ತಾನೆ |
ನಾಮಸ್ಮರಣೆ ಮಾಡಿರೆಂದು ನುಡಿಯುತ್ತಾನೆ ||
|| ಏನು ಮಾಡ್ತಾನೊ ||
6. || ಕೊರಳಿಗೆ ಕೈಯನು ಹಾಕಿ ತಾನು| ನೆಗೆಯುತ್ತಾನೆ
ಶ್ರೀರಾಮ ಸೇವೆಗೆಂದು | ತಿಳಿಸುತ್ತಾನೆ ||
ಬನ್ನಿ ಬನ್ನಿ ಬನ್ನಿ ಎಂದು ಕರೆಯುತ್ತಾನೆ |
ಬೊಬ್ಬಿಟ್ಟು ಕೂಗುತ್ತಾ | ನಗುತ್ತಾನೆ ||
|| ಏನು ಮಾಡ್ತಾನೊ |
7. || ಹಿಂಡುಗಟ್ಲೆ ಭಕ್ತರನ್ನು ಕರೆಸುತ್ತಾನೆ |
ಹೊಟ್ಟೆ ತುಂಬ ಅನ್ನವನ್ನು ಹಾಕುತ್ತಾನೆ ||
ದೂರಕೆ ತನ್ನ ದೃಷ್ಟಿಯನ್ನು ಬೀರುತ್ತಾನೆ |
ಭಕ್ತರ ತಾನು ಸಲಹುತ ನಿಲ್ಲುತ್ತಾನೆ ||
ಬೆಲಗೂರಿನಲ್ಲಿ ಭಕ್ತರನೆಲ್ಲಾ ಸಲಹುತ್ತಾನೆ ||
|| ಏನು ಮಾಡ್ತಾನೊ ||
0 ಕಾಮೆಂಟ್ಗಳು