|| ವೆಂಕಟರಮಣ ಸ್ತುತಿ ||
ರಚನೆ : ಪುರಂದರದಾಸರು
ವೆಂಕಟರಮಣ ವೇದಾಂತ ನಿನ್ನಯ ಪಾದ
ಪಂಕಜ ಕಂಡ ಮೇಲೆ
ಮಂಕು ಮಾನವರ ಬೇಡಿಸುವುದುಚಿತವೆ
ಶಂಖಚಕ್ರಾಂಕಿತನೆ ||ಪ||
ಕ್ಷೀರ ಸಾಗರವ ಪೊಂದಿದವ ಮಥಿಸಿದ
ನೀರು ಮಜ್ಜಿಗೆ ಕಾಣನೆ?
ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತವಗೆ
ದೋರೆ ತಿಂತ್ರಿಣಿ ಬಯಕೆಯೆ ||೧||
ಸಾರ್ವ ಭೂಪಾಲನ ಸೂನು ಎನಿಸಿದವಗೆ
ಸೂರೆಗೂಳಿನ ತಿರುಕೆ ?
ನಾರಿಲಕ್ಷ್ಮೀಕಾಂತ ನಿನ್ನ ಪೊಂದಿದವಗೆ
ದಾರಿದ್ರ್ಯದಟ್ಟುಳಿಯೆ ||೨||
ಸುರ ನದಿಯಲಿ ಮಿಂದು ಶುಚಿಯಾದ ಮೇಲಿನ್ನು
ದುರಿತಗಳಟ್ಟುಳಿಯೆ ?
ಪರಮ ಪುರುಷ ನಿನ್ನ ಪೊಂದಿದ್ದ ದಾಸರ್ಗೆ
ಅರಿಗಳ ಭೀತಿಯುಂಟೆ ||೩||
ಗರುಡನ ಮಂತ್ರವ ಕಲಿತು ಜಪಿಸುವಗೆ
ಉರಗನ ಹಾವಳಿಯೆ ?
ಹರಿ ಪಕ್ಕದೊಳು ಮನೆ ಕಟ್ಟಿದ ನರನಿಗೆ
ಕರಿಗಳ ಭೀತಿಯುಂಟೆ ||೪||
ಪರಮ ಪುರುಷ ಗುಣ ಪೂರ್ಣ ನೀನಹುದೆಂದು
ಮರೆಹೊಕ್ಕೆ ಕಾಯೊ ಎನ್ನ
ಉರಗಾದ್ರಿವಾಸ ಶ್ರೀ ಪುರಂದರ ವಿಟ್ಠಲ
ಪರಬ್ರಹ್ಮ ನಾರಾಯಣ ||೫||
0 ಕಾಮೆಂಟ್‌ಗಳು