|| ವಿಠ್ಠಲ ಸ್ತುತಿ ||
ವಿಟ್ಠಲಾ ಎನ್ನಿರೊ ಸುಜನರೆಲ್ಲಾ ll
ವಿಟ್ಠಲಾ ಎಂದಾರೆ ಸುಟ್ಟು ಹೋಗೋದು ಪಾಪ ll
ಪ್ರಾತಃ ಕಾಲದೊಳು ಸ್ನಾನಾದಿ
ಕರ್ಮ ಮುಗಿಸೀ ವಿಟ್ಠಲಾ ಎನ್ನಿರೊ
ವಾತದೇವನ ದ್ವಾರ ಅರ್ಪಿಸುತ್ತಾ
ನೀವು ವಿಟ್ಠಲಾ ಎನ್ನಿರೊ ll
ಗುರುಗಳಲ್ಲಿಗೆ ಪೊಗಿ ವಂದಿಸಿ
ಮೆಲ್ಲಾನೆ ವಿಟ್ಠಲಾ ಎನ್ನಿರೊ
ಮರುತಮತದ ಸಚ್ಛಾಸ್ತ್ರಗಳ
ನೋಡುತಾ ವಿಟ್ಠಲಾ ಎನ್ನಿರೊ ll 2 ll
ಪಂಚಭೇದ ಪ್ರಾಪಂಚ ಸರ್ವವು
ತಿಳಿದು ವಿಟ್ಠಲಾ ಎನ್ನಿರೊ
ಪಂಚಬಾಣನಯ್ಯ ಪಂಚರೂಪದಿ
ತೋರುವಾ ವಿಟ್ಠಲಾ ಎನ್ನಿರೊ ll 3 ll
ಶ್ರೀಪ್ರಾರಂಭಮಾಡಿ ಪರಮೇಷ್ಠಿ
ಪರಿಯಂತ ವಿಟ್ಠಲಾ ಎನ್ನಿರೊ
ಶ್ರೀಪ್ರಣವ ಪ್ರತಿಪಾದ್ಯಗಿವರು
ಪ್ರತಿಬಿಂಬರೆಂದು ವಿಟ್ಠಲಾ ಎನ್ನಿರೊ ll 4 ll
ಮಾತುಮಾತುಗಳೆಲ್ಲಾ ಶ್ರೀಹರಿಸ್ತೋತ್ರವೆಂದು
ವಿಟ್ಠಲಾ ಎನ್ನಿರೊ
ಆತುಮಾಂತಾರಾತ್ಮನೆಂದು ಕೂಗುತ
ಒಮ್ಮೆ ವಿಟ್ಠಲಾ ಎನ್ನಿರೊ ll 5 ll
ತೀರ್ಥಕ್ಷೇತ್ರಗಳಿಗೆ ಪೊಗಿ
ಬರುವಾಗ ವಿಟ್ಠಲಾ ಎನ್ನಿರೊ
ಪಾರ್ಥಸಖನ ಪ್ರೇರಣೆಯಿಂದ
ಮಾಡಿದೆವೆಂದು ವಿಟ್ಠಲಾ ಎನ್ನಿರೊ ll 6 ll
ನಂಬೀದ ಜನರಿಗೆ ಬೆಂಬಲನಾಗುವ
ವಿಟ್ಠಲಾ ಎನ್ನಿರೊ
ಸಂಭ್ರಮದಿಂದಾ ಸಂರಕ್ಷಿಸುವನೆ
ಇವನೂ ವಿಟ್ಠಲಾ ಎನ್ನಿರೊ ll 7 ll
ಕಂಚಿಕಾಳಾಹಸ್ತಿ ಶ್ರೀರಂಗ
ಮೊದಲಾಗಿರುವ ವಿಟ್ಠಲಾ ಎನ್ನಿರೊ
ವಂಚನೆಯಿಲ್ಲಾದೆ ಭಜಿಸಿದವರ
ಪೊರೆವಾ ವಿಟ್ಠಲಾ ಎನ್ನಿರೊ ll 8 ll
ಪಂಚಪ್ರಾಣಾರಲಿನಿಂತು
ಕಾರ್ಯಮಾಳ್ಪ ವಿಟ್ಠಲಾ ಎನ್ನಿರೊ
ಸಂಚಿತಾಗಾಮಿ ಕರ್ಮ ಇವನಿಂದ
ನಾಶವೆಂದು ವಿಟ್ಠಲಾ ಎನ್ನಿರೊ ll 9 ll
ಊರ್ಧ್ವಪುಂಡ್ರಗಳು ದ್ವಾದಶನಾಮ
ಇಡುವಾಗ ವಿಟ್ಠಲಾ ಎನ್ನಿರೊ
ಶುದ್ಧನಾಗೀ ಶುಭ್ರಹೊಸ ವಸ್ತ್ರ
ಹೊದೆವಾಗ ವಿಟ್ಠಲಾ ಎನ್ನಿರೊ ll 10 ll
ಪಂಚಮುದ್ರೆಯಲಿ ಪಂಚರೂಪದಿ
ಇರುವ ವಿಟ್ಠಲಾ ಎನ್ನಿರೊ
ನಿರ್ವಂಚನಾಗಿ ಧರಿಸಿದವರಿಗೊಲಿವಾ
ವಿಟ್ಠಲಾ ಎನ್ನಿರೊ ll 11 ll
ವಾದ್ಯತುಂಬಿಸಿ ಶಿರಸಿನ
ಪರಿಯಂತ ವಿಟ್ಠಲಾ ಎನ್ನಿರೊ
ವೇದೈಕವೇದ್ಯ ವಿಶ್ವಾಮೂರ್ತಿ
ಕಾರ್ಯಗಳೆಂದು ವಿಟ್ಠಲಾ ಎನ್ನಿರೊ ll 12 ll
ಚೇತನಾ ಚೇತನ ಜಡದೊಳಗೆ
ನೀವು ವಿಟ್ಠಲಾ ಎನ್ನಿರೊ
ಪ್ರೀತಿಯಿಂದಾಲಿ ಪೂಜೆಮಾಡಿದವರಾಗೆ
ಒಲಿವ ವಿಟ್ಠಲಾ ಎನ್ನಿರೊ ll 13 ll
ಈ ರೀತಿಯಲಿ ಅನಂತಾನಂತ
ಪರಿ ಚಿಂತಿಸಿ ವಿಟ್ಠಲಾ ಎನ್ನಿರೊ
ಶಾರೀರದೊಳಿರುವ ಪ್ರಾಜ್ಞನಲಿ
ಕೂಡಿಸಿ ವಿಟ್ಠಲಾ ಎನ್ನಿರೊ ll 14 ll
ಮಧ್ವಾಂತರ್ಯಾಮಿಯಾಗಿ ಉಡುಪಿಯಲ್ಲಿ
ನಿಂತ ವಿಟ್ಠಲಾ ಎನ್ನಿರೊ
ಮುದ್ದುಮೋಹನ್ನ ವಿಟ್ಠಲನೆ
ಜಗಕೆ ಕರ್ತೃ ವಿಟ್ಠಲಾ ಎನ್ನಿರೊ ll 15 ll
0 ಕಾಮೆಂಟ್‌ಗಳು