|| ಪುರಂದರ ದಾಸರ ಕೃತಿ ||
ಪಾಪಿ ಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತ
ಸುಗುಣದ ಘನವ||ಪ||
ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ
ಮೃತ್ಯು ಬಲ್ಲುದೆ ವೇಳೆ ಹೊತ್ತೆಂಬುದ
ತೊತ್ತ ಬಲ್ಲಳೆ ಮಾನಾಪಮಾನವೆಂಬುದನು
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲನ್ನ ||೧||
ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ
ಮೀನು ಬಲ್ಲುದೆ ನೀರು ಸೌಳು ಸೌಳೆಂಬುದನು
ಹೀನ ಬಲ್ಲನೆ ಸುಗುಣ ದುರ್ಗುಣವನು ||೨||
ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು
ಕೋಡಗವು ಬಲ್ಲುದೆ ರತ್ನದ ಬೆಲೆಯ
ಬೇಡಿದುದನು ಕೊಡಲು ಪುರಂದರ ವಿಠಲನು
ನಾಡದೈವಗಳೇನು ಕೊಡಬಲ್ಲವೋ ||೩||

0 ಕಾಮೆಂಟ್‌ಗಳು