ರಾಮ ಸಂಕೀರ್ತನೆ
ರಾಮನ್ನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ || ಪ ||
ತಾಮರಸ ಸಖ ಸುವಾಂಶಾಬ್ಧಿ ಶರತ್ಸೋಮಾ ಕಮಲಧೀಮ || ಅ.ಪ. ||
ಧಾತನ ಅನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾ
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದಾ ಕಾಮಿತ ನೆರೆದಾ
ಭೂತಾಧಿಪನ ಭವನದೊಳರ್ಚನೆಗೊಂಡಾ ದೃತ ಕೋದಂಡಾ
ಮಾತಂಗಾರಿ ವರೂಥಿಯ ಜನಕ ಮೇದಾಗಾರಕೆ ಪೋದಾ || 1 ||
ಸೌಭಾರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿ ದಿಟ್ಟ
ನಾಭಿ ಜನ್ಮನಿಹ ನಗವರ ಸ್ಥಾನಕೆ ಬಂದ ಶುಭಗಣ ವೃಂದಾ
ವೈಭವದಿಂದಲಯೋಧ್ಯಾ ನಗರದಿ ಮೆರೆದಾ ಕಾಮಿತವೆರೆದಾ
ಸ್ವಾಭಿಮಾನದಲಿ ಸತಿಯಳಿಗಿತ್ತನು ವರವಾ ದೇವರ ದೇವಾ || 2 ||
ಜಾಂಬವಂತನಿಗೆ ಜಾನಕಿ ರಮಣನು ಇತ್ತ ತನ್ನಯ ಧ್ಯಾತ
ಸಂಭ್ರಮದಲಿ ವೇದಗರ್ಭನೊಡನಾಡ್ದಾ ಮುಕ್ತಿಯ ನೀಡ್ದಾ
ಕುಂಭೀಶ್ವರನ ಸುಕೋಶದಿ ಬಹುದಿನ ವಾಸವೆಸಗಿದನೀಶಾ
ನಂಬಿ ತುತಿಸಿದ ನರಹರಿ ಮುನಿಪಗೆ ಒಲಿದಾ ಮೋದದಿ ನಲಿದ || 3 ||
ಅಲವಬೋಧಮುನಿ ಅತಿ ಮೋದದಲರ್ಚಿಸಿದ ಸಲೆ ಮೆಚ್ಚಿಸಿದ
ಇಳೆಯೊಳು ಬಹು ಯತಿಕರ ಪೂಜಿತನಾದ ಲೀಲ ವಿನೋದಾ
ಬಲು ನಂಬಿದ ಭಕುತರ ಕಲಿಮಲಿಗಳ ಕಳೆದ ಮನದೊಳು ಪೊಳೆದ
ಸುಲಲಿತ ಗುಣನಿಧಿ ವಸುದೇಂದ್ರಾರ್ಯರ ಪ್ರಿಯ ಕವಿಜನ ಗೇಯ || 4 ||
ವಾರಿಧಿ ಬಂಧನ ವಾನರ ನಾಯಕರಾಳ ದೈತ್ಯರ ಸೀಳ್ದಾ
ನಾರದ ಮುಖ ಮುನಿನಮಿತ ಪದಾಂಬುಜನೀತಾ ತ್ರಿಗುಣಾತೀತ
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವಾ ದುರಿತವ ತಡೆವ
ನೀರಜಾಕ್ಷ ಜಗನ್ನಾಥ ವಿಠ್ಠಲ ನಿಶ್ಚಿಂತಾ ಸೀತಾಕಾಂತ ||5 ||
0 ಕಾಮೆಂಟ್‌ಗಳು