ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ - Antakana Dutharige Kinchittu Dayavilla

||ದೇವರನಾಮ ||

 ರಚನೆ : ಪುರಂದರ ದಾಸರು 



ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ

ಚಿಂತೆಯನ್ನು ಬಿಟ್ಟು ಶ್ರೀ ಹರಿಯ ನೆನೆ ಮನವೇ॥ ಪ|| 


ದಿನ ರಾತ್ರಿ ಎನ್ನದೆ ವಿಷಯ ಲಂಪಟನಾಗಿ

ಸವಿಯೂಟಗಳನುಂಡು ಭ್ರಮಿಸಬೇಡ 

ಅವನ ಕೊಂದಿವನ ಕೊಂದರ್ಥವನ್ನು ಗಳಿಸುವರೇ

ಜವನ ದೂತರು ಬರುವ ಹೊತ್ತ ನೀನರಿಯೆ  ॥1|| 


ಪುತ್ರ ಹುಟ್ಟಿದ ದಿವಸ ಹಾಲಿನೂಟದ ಹಬ್ಬ

ಮತ್ತೊಬ್ಬ ಮಗನ ಉಪನಯನ ನಾಳೆ 

ಆರ್ತಿ ಆಗಿದೆ ಬದುಕು ಸಾಯಲಾರೆನು ಎನಲು

ಮೃತ್ಯು ಹೆಡೆ ತಲೆಯಲ್ಲಿ ನಗುತಿರ್ಪುದರಿಯೇ  ॥2॥ 


ಅಟ್ಟಡುಗೆಯುಣಲಿಲ್ಲ ಇಷ್ಟ ದರುಶನವಿಲ್ಲ 

ಕೊಟ್ಟ ಸಾಲವ ಕೇಳುವ ಹೊತ್ತ ನೀನರಿಯೆ

ಕಟ್ಟಲೆ ತುಂಬಿದ ಮೇಲೆ ಕ್ಷಣ ಮಾತ್ರ ಇರಲಿಲ್ಲ

ಅಷ್ಟರೊಳು ಪುರಂದರ ವಿಠಲನೆನು ಮನವೇ  ॥3॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು