|| ಗೋವಿಂದ ಸ್ತುತಿ ||
ರಚನೆ : ಕನಕದಾಸರು
ಗೋವಿಂದ ಹರಿ ಗೋವಿಂದ
ಗೋವಿಂದ ಹರಿ ಗೋವಿಂದ || ಪ ||
ಕೇಶವ ಕೃಷ್ಣ ಜನಾರ್ದನ || ಅ. ಪ.||
ಮತ್ಸ್ಯಾವತಾರದೊಳ್ ಆಡಿದನೆ |
ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಚ ಸೂಕರನಾಗಿ ಬಾಳಿದನೆ
ಮದ ಹೆಚ್ಚೆ ಹಿರಣ್ಯನ ಸೀಳಿದನೆ || ೧ ||
ಕುಂಬಿನಿ ದಾನವ ಬೇಡಿದನೆ
ಕ್ಷಾತ್ರರೆಂಬುವನ ಹತ ಮಾಡಿದನೆ
ಅಂಬುದಿಗೆ ಶರ ಹೂಡಿದನೆ
ಕಮಲಾಂಬಕ ಗೊಲ್ಲರೊಳಾಡಿದನೇ || ೨ ||
ವಸುದೇವನುದರದಿ ಪುಟ್ಟಿದನೆ
ಪೊಲ್ಮೆಸೆವ ಧನುಜರೊಡಗುಟ್ಟಿದನೆ
ಎಸವ ಕಾಳಿಂಗನ ಮೆಟ್ಟಿದನೆ
ಭಾದಿಸುವರ ಯಮಪುರ ಕಟ್ಟಿದನೆ || ೩ ||
ಪೂತನಿಯ ಮೈಯ ಸೋಕಿದನೆ
ಮಹಾ ಘಾತದ ಮೊಲೆಯುಂಡು ತೇಗಿದನೆ
ಘಾತಕಿಯನತ್ತಾ ನೂಕಿದನೆ
ಗೋಪವ್ರಾತ ಗೋಗಳನೆಲ್ಲಾ ಸಾಕಿದನೆ ||೪||
ಸಾಧಿಸಿ ತ್ರಿಪುರರ ಗೆಲಿದವನೇ
ಲೇಚರ ಭೇದಿಸಿ ಹಯವೇರಿ ಮೆರೆದವನೇ
ಸಾಧಿಸಿ ಸಕಲವ ತಿಳಿದವನೇ
ಬಾಡದಾದಿಕೇಶವ ಭಕ್ತಿಗೊಲಿದವನೇ || ೫ ||
0 ಕಾಮೆಂಟ್‌ಗಳು