ಅಕ್ಷರ ಪುರುಷನೆ ಅಗಣಿತ ಮಹಿಮನೆ - Akshara Purushane Aganitha Mahimane

|| ಗಣಪತಿ ಸ್ತುತಿ ||

 ರಾಗ : ಬೃಂದಾವನ





ಅಕ್ಷರ ಪುರುಷನೆ ಅಗಣಿತ ಮಹಿಮನೆ|

ಆದಿ ಪೂಜಿತನೆ ವಿನಾಯಕ ||

ಆನಂದಾಮೃತ ದರ್ಶಕ ಗಣಪನೆ |

ಆಗಮ ವಂದ್ಯನೆ ವಿನಾಯಕ ||

ಇಷ್ಟಸಿದ್ಧಿಗಳನೀಯುವ ಬೆನಕನೆ |

ಇಹಪರ ದಾಯಕ ವಿನಾಯಕ ||

ಈಶ್ವರ ಪುತ್ರನೆ ಈಪ್ಸಿತ ದಾತನೆ |

ಈರ್ಷಾ ರಹಿತನೆ ವಿನಾಯಕ ||

ಉತ್ತಮೋತ್ತಮನೆ ಉರಗ ಭೂಷಣನೆ |

ಉನ್ನತ ಮೂರ್ತಿಯೆ ವಿನಾಯಕ |

ವಿನಾಯಕ ಹೇ ವಿನಾಯಕ |

ವಿನಾಯಕ ಹೇ ವಿನಾಯಕ ||೧II


ಋಗ್ವೇದ ಪ್ರಿಯ ಋಷಿಗಣ ವಂದಿತ |

ಋಗಾದಿ ಮೂಲನೆ ವಿನಾಯಕ ||

ಎಲ್ಲ ಜೀವಿಗಳ ಕರುಣಿಪ ದೇವನೆ |

ದೈತ್ಯ ಕುಲಾಂತಕ ವಿನಾಯಕ ||

ಏಕಮೇವ ಅದ್ವಿತೀಯ ಪೂರ್ಣನೆ |

ಅತುಲೈಶ್ವರ್ಯನೆ ವಿನಾಯಕ ||

ಐಕ್ಯಮತ್ಯದಲ್ಲಿ ನಡೆಯುವ ನರರಿಗೆ |

ನೆಮ್ಮದಿ ನೀಡುವ ವಿನಾಯಕ ||

ಒಂದೇ ಮನದಲಿ ಭಜಿಸುವ ಭಜಕರ |

ಭವಭಯ ಕಳೆಯುವ ವಿನಾಯಕ ||

ವಿನಾಯಕ ಹೇ ವಿನಾಯಕ |

ವಿನಾಯಕ ಹೇ ವಿನಾಯಕ ||೨||


ಓಂಕಾರ ರೂಪನೆ ಓಂಶಕ್ತಿ ಗಣಪನೆ |

ಓಂ ಹರ ಸುತನೇ ವಿನಾಯಕ ||

ಔದಾರ್ಯಾಶ್ರಮ ಔತ್ಸುಕ್ಯ ದಾತನೆ |

ಔಪಾಸ್ಯ ಮೂರ್ತಿಯೆ ವಿನಾಯಕ ||

ಅಂಬಾ ತನಯನೆ ಅಂಜಿಕೆ ಕಳೆವನೇ |

ಅಂತರ್ಯಾಮಿಯೆ ವಿನಾಯಕ ||

ಅಃ ನಿನ್ನ ಮಹಿಮೆಯು ಅದ್ಭುತವಹುದಯ್ಯ |

ಅಮಿತಾನಂದ ಕೊಡು ವಿನಾಯಕ |

ವಿನಾಯಕ ಹೇ ವಿನಾಯಕ |

ವಿನಾಯಕ ಹೇ ವಿನಾಯಕ ||೩||


ಹರಿಹರ ಆನಂದ ಸರಸ್ವತಿ ರಚಿಸಿದ |

ಸ್ತೋತ್ರಕೆ ಕೃಪೆ ಮಾಡು ವಿನಾಯಕ ||

ಗುರುಚರಣಾಂಬುಜ ನಿರ್ಭರ ಭಕ್ತರ |

ಮರೆಯದೆ ಪಾಲಿಸು ವಿನಾಯಕ ||

ನಿನ್ನನೆ ಭಜಿಸುವೆ ನಿನ್ನನೆ ಹಾಡುವೆ |

ನಿನ್ನನೆ ಹೊಗಳುವೆ ವಿನಾಯಕ ||

ಉನ್ನತಿಯನು ಕೊಡು ಸನ್ಮತಿಯನು ಕೊಡು |

ಸದ್ಗತಿಯನು ಕೊಡು ವಿನಾಯಕ ||೪||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು