ಜಗದ್ಗುರೋ ಜಯ ಜಗದ್ಗುರೋ - Jagadguro Jaya Jagadguro

|| ಶಂಕರ ಸ್ತುತಿ ||




ಜಗದ್ಗುರೋ ಜಯ ಜಗದ್ಗುರೋ

ಶಂಕರ ದೇಶಿಕ ಜಗದ್ಗುರೋ

ನಿನ್ನಯ ಚರಿತೆಯ ಪಾಡುವೆ ನಾನು

ಪಾಲಿಸು ನನ್ನನು ಜಗದ್ಗುರೋ || ಪಲ್ಲವಿ ||



ಲೋಕದಿ ಅವೈದಿಕ ಮತಗಳ ಖಂಡಿಸಿ

ಧರ್ಮವ ಸ್ಥಾಪಿಸಬೇಕೆಂಬ

ದೇವ ದೇವರ ಪ್ರಾರ್ಥನೆಗೊಪ್ಪಿದೆ

ದಕ್ಷಿಣಾಮೂರ್ತಿಯೆ ಜಗದ್ಗುರೋ

ಪರಮ ನೀನಾದರು ಮಾನವನಂತೆ

ಧರ್ಮವ ರಕ್ಷಣೆ ಮಾಡಲು

ತ್ಯಜಿಸಿ ಕೈಲಾಸವ ಮೌನವ ಬಿಟ್ಟು

ಧರೆಗವತರಿಸಿದೆ ಜಗದ್ಗುರೋ ||1||



ಕಾಲಟಿಯೆಂಬ ಗ್ರಾಮವು ನಿನ್ನಯ

ಪಾದದ ಮೊದಲನೆ ಸ್ಪರ್ಶವನು

ಪಡೆದು ಪವಿತ್ರತೆ ಹೊಂದಿತು ಬೆಳಗಿತು

ವಿಶ್ವಪಾಲಕ ಜಗದ್ಗುರೋ

ಶಿವಗುರು ಆರ್ಯಾಂಬೆ ಪುಣ್ಯ ದಂಪತಿ

ಮಾಡಿದ ತಪವನು ಮೆಚ್ಚುತಲಿ

ವೈಶಾಖ ಶುಕ್ಲ ಪಂಚಮಿ ದಿನದಿ

ಜನ್ಮವೆತ್ತಿದೆ ಜಗದ್ಗುರೋ  || 2 ||



ಎಲ್ಲಾ ತಿಳಿದವನಾದರು ನೀನು ಮತ್ತೆ

ತಿಳಿಯುವ ನಾಟಕ ಗೈದೆ

ಮೊದಲ ವರ್ಷವೆ ಭಾಷೆಗಳೆಲ್ಲವ ಕಲಿತ

ಮಹಿಮ ನೀ ಜಗದ್ಗುರೋ

ಪಂಚಮ ವರುಷದಿ ಉಪವೀತವ ನೀ

ಧರಿಸಿದೆ ನಾಲ್ಕು ವೇದಗಳ

ಎಂಟನೆ ವಯಸಲಿ ಕಂಠದಿ ಧರಿಸಿದೆ

ವೇದ ರಕ್ಷಕ ಜಗದ್ಗುರೋ      || 3 ||



ಭಿಕ್ಷೆಯ ಬೇಡುತ ದೀನಳು ದೈನ್ಯದಿ

ನೀಡಿದ ನೆಲ್ಲಿಯ ಕಾಯಿಯನು

ಸೇವಿಸಿ ಸ್ವರ್ಣದ ವೃಷ್ಟಿಯ ಗೈದೆ

ಕುಬೇರ ಮಿತ್ರನೆ ಜಗದ್ಗುರೋ

ಜಳಕಕೆ ತೆರಳಿ ಬಿಸಿಲಲಿ ಬಳಲಿ

ಇಳೆಯಲಿ ಉರುಳಿದ ಮಾತೃವಿನ

ಜಳಕಕೆ ನದಿಯನು ಮನೆಗೆ ತರಿಸಿದ

ಗಂಗಾಧರ ನೀ ಜಗದ್ಗುರೋ    || 4 ||



ಪೂರ್ಣಾ ನದಿಯಲಿ ಮೊಸಳೆಯ ಪಾದವ

ಪಿಡಿದಿಹ ನೆಪದಲಿ ತಾಯಿಯನು

ಒಪ್ಪಿಸಿ ಸನ್ಯಾಸಕೆ ಅಪ್ಪಣೆ ಪಡೆದೆ

ಸತ್ಯ ಸ್ವರೂಪನೆ ಜಗದ್ಗುರೋ

ಇಂದ್ರಾದಿಗಳಿಗು ಅಪ್ಪಣೆ ಮಾಡುವ

ಈಶನೆ ನೀನು ಮಾನುಷದಿ

ಜನನಿಯ ಅಪ್ಪಣೆ ಪಡೆಯುವ ರೂಪದಿ

ಮಾರ್ಗವ ತೋರಿದೆ ಜಗದ್ಗುರೋ  || 5 ||



ಎಲ್ಲವ ತ್ಯಜಿಸಿ ಕ್ರಮ ಸನ್ಯಾಸಕೆ

ಗುರುಗಳ ಹುಡುಕುತ ಧೈರ್ಯದಲಿ

ನರ್ಮದೆ ತೀರದಿ ಗುಹೆಯಲಿ ಕಂಡೆ

ಗುರು ಗೋವಿಂದರ ಜಗದ್ಗುರೋ

ಗುರುಗಳ ಪಾದದ ಸೇವೆಯ ಗೈಯುತ

ಕಲಿತಿಹೆ ಎಲ್ಲ ವಿದ್ಯೆಯನು

ನಿನಗೆ ನೀನೆ ಸಾಟಿಯು ಜಗದಿ

ವಿದ್ಯೆಗಳೊಡೆಯ ಜಗದ್ಗುರೋ           || 6 ||



ನರ್ಮದೆ ನದಿಯ ರಭಸವ ತಡೆದೆ

ಬಳಸಿಯೆ ನಿನ್ನಯ ಕಮಂಡಲ

ಸಂಸೃತಿ ಸಾಗರ ದಾಟಿದ ನಿನಗೆ

ಹೆಚ್ಚಿನದೇನಿದೆ ಜಗದ್ಗುರೋ

ಗುರುವಾಣತಿಯೊಳು ಕಾಶಿಯ ಸೇರಿದೆ

ಶಿಷ್ಯರ ಸಂಗ್ರಹ ಮಾಡುತಲಿ

ವಿಶ್ವೇಶ್ವರನ ಅಪ್ಪಣೆ ಪಡೆದು

ಭಾಷ್ಯವ ರಚಿಸಿದೆ ಜಗದ್ಗುರೋ     || 7 ||



ಸೌಂದರ್ಯಲಹರಿ ಮೊದಲಾಗಿರುತಿಹ

ನಾನಾ ರೂಪದ ಸ್ತೋತ್ರಗಳ

ರಚಿಸಿದೆ ನೀನು ನಮ್ಮಲಿ ದಯೆಯನು

ತೋರಿಸಲೋಸುಗ ಜಗದ್ಗುರೋ

ಜೇನೇ ಸಿಹಿಯು ಕಬ್ಬೇ ಸಿಹಿಯು

ಎನ್ನುತ ಯಾವನು ಪೇಳುವನೋ

ಅವನೇ ನಿನ್ನಯ ಸ್ತೋತ್ರದ ರುಚಿಯ

ಸವಿಯದೆ ಹೋದವ ಜಗದ್ಗುರೋ    || 8 ||



ಭಾಷ್ಯದ ಪಾಠವ ಗೈಯುತಲಿರಲು

ಸನಿಹಕೆ ವ್ಯಾಸರು ಬಂದೊಮ್ಮೆ

ಕೇಳಲು ಪ್ರಶ್ನೆಗಳನುಪಮದುತ್ತರ

ನೀಡಿದ ಮಹಿಮನೆ ಜಗದ್ಗುರೋ

ತಮ್ಮ ಮನೋಗತ ಭಾಷ್ಯದಿ ಕಂಡು

ಆ ಚಂದ್ರಾರ್ಕವು ಭಾಷ್ಯವಿದು

ಬೆಳಗಲಿ ಎಂದು ಹರಸಿದ ವ್ಯಾಸರ

ಪ್ರೀತಿಯ ಪಾತ್ರನೆ ಜಗದ್ಗುರೋ        || 9 ||



ದುಷ್ಟ ಮತಗಳ ಖಂಡನೆಗೈದೆ

ಕುಮಾರಿಲಭಟ್ಟ ಪಾದರಿಗೆ

ಅಂತಿಮ ಕ್ಷಣದಿ ದರುಶನ ನೀಡಿ

ಪಾವನಗೊಳಿಸಿದ ಜಗದ್ಗುರೋ

ಮಂಡನರೆಂಬ ಕರ್ಮಠರನ್ನು

ವಾದದಿ ಗೆಲಿದು ಮೋದದಲಿ

ಶಿಷ್ಯ ಪರಿಗ್ರಹ ಮಾಡಿ ಅವರಿಗೆ

ಸನ್ಯಾಸ ನೀಡಿದ ಜಗದ್ಗುರೋ          || 10 ||



ಪರಮ ವಿರಾಗಿ ನೀ ಕಾಪಾಲಿಕನ

ಕೋರಿಕೆಯಂತೆ ಶಿರವನು ನೀಡಲು

ಒಪ್ಪಿದೆಯಾದರು ನರಸಿಂಹ ಕಾವಲ

ಶಿಷ್ಯನೊಳ್ ಪಡೆದೆ ಜಗದ್ಗುರೋ

ಶೃಂಗ ಗಿರಿಯಲಿ ಕಪ್ಪೆಗೆ ನೆರಳನು

ನೀಡುತಲಿರುವ ಸರ್ಪವನು

ವೀಕ್ಷಿಸಿ ಅಲ್ಲೇ ಮೊದಲನೆ ಪೀಠವ

ಸ್ಥಾಪನೆಗೈದೆ ಜಗದ್ಗುರೋ           || 11 ||


ಯಂತ್ರ ರಾಜದಲಿ ಶಾರದ ಮಾತೆಯ

ಸಾನಿಧ್ಯವನು ನೆಲೆಗೊಳಿಸಿ

ಆಕೆಯ ಅರ್ಚನೆಗೈದೆ ಮಹಾತ್ಮನೆ

ಶಾರದಾ ಪೂಜಕ ಜಗದ್ಗುರೋ

ಮೂವತ್ತೆರಡು ವರ್ಷದ ಅವಧಿಯ

ನಿನ್ನಯ ಜೀವನ ಕಾಲದಲಿ

ಅನೇಕ ವರ್ಷ ಶೃಂಗ ಗಿರಿಯಲಿ

ಪಾಠವ ಗೈದೆ ಜಗದ್ಗುರೋ    || 12 ||



ತೋಟಕ ಗುರುವಿಗೆ ಜ್ಞಾನವೆಲ್ಲವ

ಒಮ್ಮೆಯೆ ನೀಡಿ ಪಾಲಿಸಿದೆ

ನಿನ್ನಿಂದಾಗದು ಎಂಬುದು ಲೋಕದಿ

ಇಲ್ಲವೆ ಇಲ್ಲ ಜಗದ್ಗುರೋ

ಕೊಟ್ಟ ಮಾತಿಗೆ ತಪ್ಪದೆ ನೀನು

ತಾಯಿಯ ಅಂತಿಮ ಕಾಲದಲಿ

ಬಳಿಯಲಿ ಇದ್ದು ವಿಷ್ಣು ಲೋಕವ

ದೊರಕಿಸಿ ಕೊಟ್ಟೆ ಜಗದ್ಗುರೋ        || 13 ||



ಶೃಂಗೇರಿ ಬದರಿ ಪುರಿ ದ್ವಾರಕೆ

ನಾಲ್ಕು ಆಮ್ನಾಯ ಪೀಠಗಳ

ಸ್ಥಾಪನೆ ಗೈದೆ ನಾಲ್ಕು ದಿಕ್ಕಲಿ

ಚತುರ್ಮಠ ಸ್ಥಾಪಕ ಜಗದ್ಗುರೋ

ಸುರೇಶ್ವರ ತೋಟಕ ಹಸ್ತಾಮಲಕ

ಪದ್ಮ ಪಾದ ಯತಿವರರ

ನಾಲ್ಕು ಪೀಠಕೆ ಗುರುಗಳ ಗೈದೆ

ಯತಿಗಳ ಒಡೆಯ ಜಗದ್ಗುರೋ         || 14 ||



ಕೇರಳ ರಾಜನು ನಿನ್ನಯ ಬಳಿಯಲಿ

ತನ್ನಯ ನಾಟಕ ನಾಶವನು

ಪೇಳಲು ಮತ್ತೆ ಅವನಿಗೆ ಅವುಗಳ

ನುಡಿದು ತಿಳಿಸಿದೆ ಜಗದ್ಗುರೋ

ಗೌಡ ಪಾದರ ದರ್ಶಿಸಿ ನೀನು

ನಿನ್ನಯ ಭಾಷ್ಯವ ತೋರಿಸುತ

ಪರಮ ಗುರುಗಳ ತುಷ್ಟಿಯ ನೋಡಿ

ತೋಷವ ಪಟ್ಟೆ ಜಗದ್ಗುರೋ       || 15 ||



ಕಾಶ್ಮೀರಕೆ ತೆರಳಿ ವಾದಿ ಶ್ರೇಷ್ಠರ

ನಿನ್ನಯ ವಾದದಿ ಗೆಲ್ಲುತಲಿ

ಸರ್ವಜ್ಞ ಪೀಠಕೆ ಶೋಭೆಯ ತಂದೆ

ನಮ್ಮಯ ತಂದೆ ಜಗದ್ಗುರೋ

ನಿನ್ನಯ ಧಾಮವ ಹೊಂದಲು ಬಯಸಿ

ತಲುಪುತ ನೀ ಕೇದಾರವನು

ಅಂತರ್ಧಾನವ ಹೊಂದಿದೆ ಶಿವನೆ

ಅದ್ವೈತ ಸ್ಥಾಪಕ ಜಗದ್ಗುರೋ        || 16 ||



ತಂದೆಯು ನೀನೆ ತಾಯಿಯು ನೀನೆ

ನೀನೆ ನನ್ನಯ ದೈವವು

ನಿನ್ನನು ಬಿಟ್ಟು ಗತಿ ಇನ್ಯಾರೊ

ನೀನೆ ಹೇಳೋ ಜಗದ್ಗುರೋ

ನಿನ್ನನು ಬಿಟ್ಟು ಬೇರೆ ಗುರುವನು

ಕನಸಲು ನೆನೆಯೆನು ಒಮ್ಮೆಯು

ನೀನೆ ನನ್ನಯ ಹೃದಯದಿ ಇರಲು

ಯಾರಿಂದೇನೊ ಜಗದ್ಗುರೋ     || 17 ||



ನನ್ನಯ ಕಣ್ಣಲಿ ಜನಿಸಿದ ಜಲವು

ಎದೆಯ ತಲುಪುವ ಮುನ್ನವೆ

ನನ್ನಯ ಶೋಕವ ಹರಿಸೋ ಹರನೆ

ದೀನರ ಬಂಧುವೆ ಜಗದ್ಗುರೋ

ನಿನ್ನಯ ಮೂರ್ತಿಯ ನೋಡುತ ಹಾಡುತ

ಹೃದಯದಿ ಪ್ರೀತಿಯ ಮಾಡುತಲಿ

ಕಣ್ಣಲಿ ತೋಷದ ಬಾಷ್ಪವ ಸುರಿಸುವ

ನನ್ನನು ಹರಸೋ ಜಗದ್ಗುರೋ     || 18 ||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು