|| ಶಂಕರ ಸ್ತುತಿ ||
ಜಗದ್ಗುರೋ ಜಯ ಜಗದ್ಗುರೋ
ಶಂಕರ ದೇಶಿಕ ಜಗದ್ಗುರೋ
ನಿನ್ನಯ ಚರಿತೆಯ ಪಾಡುವೆ ನಾನು
ಪಾಲಿಸು ನನ್ನನು ಜಗದ್ಗುರೋ || ಪಲ್ಲವಿ ||
ಲೋಕದಿ ಅವೈದಿಕ ಮತಗಳ ಖಂಡಿಸಿ
ಧರ್ಮವ ಸ್ಥಾಪಿಸಬೇಕೆಂಬ
ದೇವ ದೇವರ ಪ್ರಾರ್ಥನೆಗೊಪ್ಪಿದೆ
ದಕ್ಷಿಣಾಮೂರ್ತಿಯೆ ಜಗದ್ಗುರೋ
ಪರಮ ನೀನಾದರು ಮಾನವನಂತೆ
ಧರ್ಮವ ರಕ್ಷಣೆ ಮಾಡಲು
ತ್ಯಜಿಸಿ ಕೈಲಾಸವ ಮೌನವ ಬಿಟ್ಟು
ಧರೆಗವತರಿಸಿದೆ ಜಗದ್ಗುರೋ ||1||
ಕಾಲಟಿಯೆಂಬ ಗ್ರಾಮವು ನಿನ್ನಯ
ಪಾದದ ಮೊದಲನೆ ಸ್ಪರ್ಶವನು
ಪಡೆದು ಪವಿತ್ರತೆ ಹೊಂದಿತು ಬೆಳಗಿತು
ವಿಶ್ವಪಾಲಕ ಜಗದ್ಗುರೋ
ಶಿವಗುರು ಆರ್ಯಾಂಬೆ ಪುಣ್ಯ ದಂಪತಿ
ಮಾಡಿದ ತಪವನು ಮೆಚ್ಚುತಲಿ
ವೈಶಾಖ ಶುಕ್ಲ ಪಂಚಮಿ ದಿನದಿ
ಜನ್ಮವೆತ್ತಿದೆ ಜಗದ್ಗುರೋ || 2 ||
ಎಲ್ಲಾ ತಿಳಿದವನಾದರು ನೀನು ಮತ್ತೆ
ತಿಳಿಯುವ ನಾಟಕ ಗೈದೆ
ಮೊದಲ ವರ್ಷವೆ ಭಾಷೆಗಳೆಲ್ಲವ ಕಲಿತ
ಮಹಿಮ ನೀ ಜಗದ್ಗುರೋ
ಪಂಚಮ ವರುಷದಿ ಉಪವೀತವ ನೀ
ಧರಿಸಿದೆ ನಾಲ್ಕು ವೇದಗಳ
ಎಂಟನೆ ವಯಸಲಿ ಕಂಠದಿ ಧರಿಸಿದೆ
ವೇದ ರಕ್ಷಕ ಜಗದ್ಗುರೋ || 3 ||
ಭಿಕ್ಷೆಯ ಬೇಡುತ ದೀನಳು ದೈನ್ಯದಿ
ನೀಡಿದ ನೆಲ್ಲಿಯ ಕಾಯಿಯನು
ಸೇವಿಸಿ ಸ್ವರ್ಣದ ವೃಷ್ಟಿಯ ಗೈದೆ
ಕುಬೇರ ಮಿತ್ರನೆ ಜಗದ್ಗುರೋ
ಜಳಕಕೆ ತೆರಳಿ ಬಿಸಿಲಲಿ ಬಳಲಿ
ಇಳೆಯಲಿ ಉರುಳಿದ ಮಾತೃವಿನ
ಜಳಕಕೆ ನದಿಯನು ಮನೆಗೆ ತರಿಸಿದ
ಗಂಗಾಧರ ನೀ ಜಗದ್ಗುರೋ || 4 ||
ಪೂರ್ಣಾ ನದಿಯಲಿ ಮೊಸಳೆಯ ಪಾದವ
ಪಿಡಿದಿಹ ನೆಪದಲಿ ತಾಯಿಯನು
ಒಪ್ಪಿಸಿ ಸನ್ಯಾಸಕೆ ಅಪ್ಪಣೆ ಪಡೆದೆ
ಸತ್ಯ ಸ್ವರೂಪನೆ ಜಗದ್ಗುರೋ
ಇಂದ್ರಾದಿಗಳಿಗು ಅಪ್ಪಣೆ ಮಾಡುವ
ಈಶನೆ ನೀನು ಮಾನುಷದಿ
ಜನನಿಯ ಅಪ್ಪಣೆ ಪಡೆಯುವ ರೂಪದಿ
ಮಾರ್ಗವ ತೋರಿದೆ ಜಗದ್ಗುರೋ || 5 ||
ಎಲ್ಲವ ತ್ಯಜಿಸಿ ಕ್ರಮ ಸನ್ಯಾಸಕೆ
ಗುರುಗಳ ಹುಡುಕುತ ಧೈರ್ಯದಲಿ
ನರ್ಮದೆ ತೀರದಿ ಗುಹೆಯಲಿ ಕಂಡೆ
ಗುರು ಗೋವಿಂದರ ಜಗದ್ಗುರೋ
ಗುರುಗಳ ಪಾದದ ಸೇವೆಯ ಗೈಯುತ
ಕಲಿತಿಹೆ ಎಲ್ಲ ವಿದ್ಯೆಯನು
ನಿನಗೆ ನೀನೆ ಸಾಟಿಯು ಜಗದಿ
ವಿದ್ಯೆಗಳೊಡೆಯ ಜಗದ್ಗುರೋ || 6 ||
ನರ್ಮದೆ ನದಿಯ ರಭಸವ ತಡೆದೆ
ಬಳಸಿಯೆ ನಿನ್ನಯ ಕಮಂಡಲ
ಸಂಸೃತಿ ಸಾಗರ ದಾಟಿದ ನಿನಗೆ
ಹೆಚ್ಚಿನದೇನಿದೆ ಜಗದ್ಗುರೋ
ಗುರುವಾಣತಿಯೊಳು ಕಾಶಿಯ ಸೇರಿದೆ
ಶಿಷ್ಯರ ಸಂಗ್ರಹ ಮಾಡುತಲಿ
ವಿಶ್ವೇಶ್ವರನ ಅಪ್ಪಣೆ ಪಡೆದು
ಭಾಷ್ಯವ ರಚಿಸಿದೆ ಜಗದ್ಗುರೋ || 7 ||
ಸೌಂದರ್ಯಲಹರಿ ಮೊದಲಾಗಿರುತಿಹ
ನಾನಾ ರೂಪದ ಸ್ತೋತ್ರಗಳ
ರಚಿಸಿದೆ ನೀನು ನಮ್ಮಲಿ ದಯೆಯನು
ತೋರಿಸಲೋಸುಗ ಜಗದ್ಗುರೋ
ಜೇನೇ ಸಿಹಿಯು ಕಬ್ಬೇ ಸಿಹಿಯು
ಎನ್ನುತ ಯಾವನು ಪೇಳುವನೋ
ಅವನೇ ನಿನ್ನಯ ಸ್ತೋತ್ರದ ರುಚಿಯ
ಸವಿಯದೆ ಹೋದವ ಜಗದ್ಗುರೋ || 8 ||
ಭಾಷ್ಯದ ಪಾಠವ ಗೈಯುತಲಿರಲು
ಸನಿಹಕೆ ವ್ಯಾಸರು ಬಂದೊಮ್ಮೆ
ಕೇಳಲು ಪ್ರಶ್ನೆಗಳನುಪಮದುತ್ತರ
ನೀಡಿದ ಮಹಿಮನೆ ಜಗದ್ಗುರೋ
ತಮ್ಮ ಮನೋಗತ ಭಾಷ್ಯದಿ ಕಂಡು
ಆ ಚಂದ್ರಾರ್ಕವು ಭಾಷ್ಯವಿದು
ಬೆಳಗಲಿ ಎಂದು ಹರಸಿದ ವ್ಯಾಸರ
ಪ್ರೀತಿಯ ಪಾತ್ರನೆ ಜಗದ್ಗುರೋ || 9 ||
ದುಷ್ಟ ಮತಗಳ ಖಂಡನೆಗೈದೆ
ಕುಮಾರಿಲಭಟ್ಟ ಪಾದರಿಗೆ
ಅಂತಿಮ ಕ್ಷಣದಿ ದರುಶನ ನೀಡಿ
ಪಾವನಗೊಳಿಸಿದ ಜಗದ್ಗುರೋ
ಮಂಡನರೆಂಬ ಕರ್ಮಠರನ್ನು
ವಾದದಿ ಗೆಲಿದು ಮೋದದಲಿ
ಶಿಷ್ಯ ಪರಿಗ್ರಹ ಮಾಡಿ ಅವರಿಗೆ
ಸನ್ಯಾಸ ನೀಡಿದ ಜಗದ್ಗುರೋ || 10 ||
ಪರಮ ವಿರಾಗಿ ನೀ ಕಾಪಾಲಿಕನ
ಕೋರಿಕೆಯಂತೆ ಶಿರವನು ನೀಡಲು
ಒಪ್ಪಿದೆಯಾದರು ನರಸಿಂಹ ಕಾವಲ
ಶಿಷ್ಯನೊಳ್ ಪಡೆದೆ ಜಗದ್ಗುರೋ
ಶೃಂಗ ಗಿರಿಯಲಿ ಕಪ್ಪೆಗೆ ನೆರಳನು
ನೀಡುತಲಿರುವ ಸರ್ಪವನು
ವೀಕ್ಷಿಸಿ ಅಲ್ಲೇ ಮೊದಲನೆ ಪೀಠವ
ಸ್ಥಾಪನೆಗೈದೆ ಜಗದ್ಗುರೋ || 11 ||
ಯಂತ್ರ ರಾಜದಲಿ ಶಾರದ ಮಾತೆಯ
ಸಾನಿಧ್ಯವನು ನೆಲೆಗೊಳಿಸಿ
ಆಕೆಯ ಅರ್ಚನೆಗೈದೆ ಮಹಾತ್ಮನೆ
ಶಾರದಾ ಪೂಜಕ ಜಗದ್ಗುರೋ
ಮೂವತ್ತೆರಡು ವರ್ಷದ ಅವಧಿಯ
ನಿನ್ನಯ ಜೀವನ ಕಾಲದಲಿ
ಅನೇಕ ವರ್ಷ ಶೃಂಗ ಗಿರಿಯಲಿ
ಪಾಠವ ಗೈದೆ ಜಗದ್ಗುರೋ || 12 ||
ತೋಟಕ ಗುರುವಿಗೆ ಜ್ಞಾನವೆಲ್ಲವ
ಒಮ್ಮೆಯೆ ನೀಡಿ ಪಾಲಿಸಿದೆ
ನಿನ್ನಿಂದಾಗದು ಎಂಬುದು ಲೋಕದಿ
ಇಲ್ಲವೆ ಇಲ್ಲ ಜಗದ್ಗುರೋ
ಕೊಟ್ಟ ಮಾತಿಗೆ ತಪ್ಪದೆ ನೀನು
ತಾಯಿಯ ಅಂತಿಮ ಕಾಲದಲಿ
ಬಳಿಯಲಿ ಇದ್ದು ವಿಷ್ಣು ಲೋಕವ
ದೊರಕಿಸಿ ಕೊಟ್ಟೆ ಜಗದ್ಗುರೋ || 13 ||
ಶೃಂಗೇರಿ ಬದರಿ ಪುರಿ ದ್ವಾರಕೆ
ನಾಲ್ಕು ಆಮ್ನಾಯ ಪೀಠಗಳ
ಸ್ಥಾಪನೆ ಗೈದೆ ನಾಲ್ಕು ದಿಕ್ಕಲಿ
ಚತುರ್ಮಠ ಸ್ಥಾಪಕ ಜಗದ್ಗುರೋ
ಸುರೇಶ್ವರ ತೋಟಕ ಹಸ್ತಾಮಲಕ
ಪದ್ಮ ಪಾದ ಯತಿವರರ
ನಾಲ್ಕು ಪೀಠಕೆ ಗುರುಗಳ ಗೈದೆ
ಯತಿಗಳ ಒಡೆಯ ಜಗದ್ಗುರೋ || 14 ||
ಕೇರಳ ರಾಜನು ನಿನ್ನಯ ಬಳಿಯಲಿ
ತನ್ನಯ ನಾಟಕ ನಾಶವನು
ಪೇಳಲು ಮತ್ತೆ ಅವನಿಗೆ ಅವುಗಳ
ನುಡಿದು ತಿಳಿಸಿದೆ ಜಗದ್ಗುರೋ
ಗೌಡ ಪಾದರ ದರ್ಶಿಸಿ ನೀನು
ನಿನ್ನಯ ಭಾಷ್ಯವ ತೋರಿಸುತ
ಪರಮ ಗುರುಗಳ ತುಷ್ಟಿಯ ನೋಡಿ
ತೋಷವ ಪಟ್ಟೆ ಜಗದ್ಗುರೋ || 15 ||
ಕಾಶ್ಮೀರಕೆ ತೆರಳಿ ವಾದಿ ಶ್ರೇಷ್ಠರ
ನಿನ್ನಯ ವಾದದಿ ಗೆಲ್ಲುತಲಿ
ಸರ್ವಜ್ಞ ಪೀಠಕೆ ಶೋಭೆಯ ತಂದೆ
ನಮ್ಮಯ ತಂದೆ ಜಗದ್ಗುರೋ
ನಿನ್ನಯ ಧಾಮವ ಹೊಂದಲು ಬಯಸಿ
ತಲುಪುತ ನೀ ಕೇದಾರವನು
ಅಂತರ್ಧಾನವ ಹೊಂದಿದೆ ಶಿವನೆ
ಅದ್ವೈತ ಸ್ಥಾಪಕ ಜಗದ್ಗುರೋ || 16 ||
ತಂದೆಯು ನೀನೆ ತಾಯಿಯು ನೀನೆ
ನೀನೆ ನನ್ನಯ ದೈವವು
ನಿನ್ನನು ಬಿಟ್ಟು ಗತಿ ಇನ್ಯಾರೊ
ನೀನೆ ಹೇಳೋ ಜಗದ್ಗುರೋ
ನಿನ್ನನು ಬಿಟ್ಟು ಬೇರೆ ಗುರುವನು
ಕನಸಲು ನೆನೆಯೆನು ಒಮ್ಮೆಯು
ನೀನೆ ನನ್ನಯ ಹೃದಯದಿ ಇರಲು
ಯಾರಿಂದೇನೊ ಜಗದ್ಗುರೋ || 17 ||
ನನ್ನಯ ಕಣ್ಣಲಿ ಜನಿಸಿದ ಜಲವು
ಎದೆಯ ತಲುಪುವ ಮುನ್ನವೆ
ನನ್ನಯ ಶೋಕವ ಹರಿಸೋ ಹರನೆ
ದೀನರ ಬಂಧುವೆ ಜಗದ್ಗುರೋ
ನಿನ್ನಯ ಮೂರ್ತಿಯ ನೋಡುತ ಹಾಡುತ
ಹೃದಯದಿ ಪ್ರೀತಿಯ ಮಾಡುತಲಿ
ಕಣ್ಣಲಿ ತೋಷದ ಬಾಷ್ಪವ ಸುರಿಸುವ
ನನ್ನನು ಹರಸೋ ಜಗದ್ಗುರೋ || 18 ||
0 ಕಾಮೆಂಟ್ಗಳು