|| ಹರಿ ಸ್ತುತಿ ||
ಮನವು ತೊಳಲುತ ಬಳಲಿದೆ॥ಪ॥
ಬೀಗ ಮುದ್ರೆಯನಿಟ್ಟ ಕೋಣೆಯೊಳಲೆವ
ಮರುಳನ ತೆರನಿದೆ॥ಅ.ಪ॥
ದಿವ್ಯ ಪ್ರೇಮಕೆ ದೊರೆವನವನು
ಶ್ರದ್ಧೆಗಲ್ಲದೆ ಒಲಿಯನು
ವೇದಶಾಸ್ತ್ರ ಪುರಾಣ
ದರ್ಶನದಾಚೆಗೆ ನಿಂತಿರುವನು॥೧॥
ಭಕ್ತಿಗೊಲಿಯುವ ಹೃದಯದಮೃತಾನಂದ
ರೂಪನು ಎಂಬರು
ಇದನರಿತೆ ಆ ಯೋಗಿವರ್ಯರು
ಯುಗಯುಗವು ತಪಗೈದರು॥೨॥
ಭಕ್ತಿ ಎಚ್ಚರಗೊಳಲು ಎದೆಯಲಿ
ಅವನೆ ನಿನ್ನನು ಸೆಳೆವನು
ಈ ರಹಸ್ಯವ ಜಗದ ಸಂತೆಯ
ಜನ ಸಮೂಹಕೆ ತಿಳಿಸೆನು ॥೩॥
ಶ್ರೀಪ್ರಸಾದನು ನುಡಿವನೀತೆರ
ಮಾತೃಭಾವದಿ ನೆನೆವೆನು
ನನ್ನ ಸೂಚನೆಯರಿತು ನೀವೆ
ತಿಳಿಯಿರಾತನ ನಿಜವನು ॥೪॥
0 ಕಾಮೆಂಟ್‌ಗಳು