ಕಾಶಿಯ ಹಾದಿಯಲಿ - Kashiya Hadiyali

|| ಕೇಶವ ನಾಮ ||





ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ

ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ 1


ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ

ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ 2


ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ

ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ 3


ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ

ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ 4


ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ

ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ 5


ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ

ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ ದಯದಿ ರಾಮರಾಮ6


ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ

ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ7


ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ

ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ 8


ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ

ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ9


ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ

ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ10


ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ

ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ11


ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ

ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ 12


ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ

ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ 13


ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ

ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ 14


ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ

ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ 15


ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ

ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ 16


ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ

ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ 17


ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ

ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ 18


ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ

ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ 19


ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ

ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ20


ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ ರಾಮರಾಮ

ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ 21


ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ

ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ 22


ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ

ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ 23


ಕೃಷ್ಣ ಎಂದರೆ ಕಷ್ಟವು ಪರಿಹಾರ ರಾಮರಾಮ

ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ 24


ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ

ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ 25






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು