ಶಕ್ತನಾದರೆ ನಂಟರೆಲ್ಲ ಹಿತರು - Shakthanadare Nentarella Hitharu

|| ಹರಿ ಸ್ತುತಿ ||




ಶಕ್ತನಾದರೆ ನಂಟರೆಲ್ಲ ಹಿತರು |

ಅಶಕ್ತನಾದರೆ ಆಪ್ತರವರೆ ವೈರಿಗಳು || ಪ ||


ಕಮಲಾರ್ಕರಿಗೆ ನಿರುತ ಕಡುನಂಟುತನವಿರಲು

ಕಮಲ ತಾ ಜಲದೊಳಗೆ ಆಡುತಿಹುದು

ಕ್ರಮತಪ್ಪಿ ನೀರಿನಿಂದ ತಡಿಗೆ ಬೀಳಲು ರವಿಯ

ಅಮಿತ ಕಿರಣಗಳಿಂದ ಕಂದಿ ಪೋಗುವುದು || 1 ||


ವನದೊಳುರಿ ಸುಡುತಿರಲು ವಾಯು ತಾ ಸೋಂಕಲ್ಕೆ

ಘನ ಪ್ರಜ್ವಲಸುತಿಹುದು ಗಗನಕಡರಿ

ಮನೆಯೊಳಿರ್ದಾ ದೀಪ ಮಾರುತನು ಸೋಂಕಿದರೆ

ಘನಶಕ್ತಿ ತಪ್ಪಿ ತಾ ನಂದಿ ಹೋಗುವುದು || 2 ||


ವರದ ಶ್ರೀ ಪುರಂದರವಿಠಲನ ದಯವಿರಲು

ಸರುವ ಜನರೆಲ್ಲ ಮೂಜಗದಿ ಹಿತರು

ಕರಿಯ ಸಲುಹಿದ ಹರಿಯ ಕರುಣ ತಪ್ಪಿದ ಮೇಲೆ

ಮೊರೆಹೊಕ್ಕರೂ ಕಾಯ್ವ ಮಹಿಮರುಂಟೇ ದೇವ ||3 ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು