|| ಹರಿ ಭಜನೆ ||
ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ||ಪ||
ಚಿಂತಾರತ್ನವೆಂಬೋ ಅನಂತನಿದ್ದಾನೆ ಪ್ರಾಣಿ||ಅ.ಪ||
ಎಳ್ಳು ಮೊನೆಯ ಮುಳ್ಳು ಕೊನೆಯ
ಪೊಳ್ಳು ಬಿಡದೆ ಒಳಗೆ ಹೊರಗೆ
ಎಲ್ಲ ಠಾವಿನಲ್ಲಿ ಲಕುಮಿ ನಲ್ಲನಿದ್ದಾನೆ ಪ್ರಾಣಿ || ೧ ||
ಗೋಪ್ತಾ ತ್ರಿಜಗದ್ ವ್ಯಾಪ್ತಾ
ಭಜಕರ ಆಪ್ತನೆನಿಸಿ ಸ್ತಂಭದಲ್ಲಿ
ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ ಪ್ರಾಣಿ || ೨ ||
ಹಿಂದೆ ನಿನ್ನ ಸಲಹಿದರ‍್ಯಾರೋ
ಮುಂದೆ ನಿನ್ನ ಕೊಲ್ಲುವರ‍್ಯಾರೋ
ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ಪ್ರಾಣಿ || ೩ ||
ಮುಕ್ಕಣ ದೇವರ್ಕಳಿಗೆ ಸಿಕ್ಕಿದ್ದ ಸೆರೆಯನ್ನು ಪರಿದು
ಚಿಕ್ಕವಂಗೆ ಅಚಲಪದವಿಯ ದಕ್ಕಿಸಿದ್ದಾನೆ ಪ್ರಾಣಿ || ೪ ||
ನಾನು ನನ್ನದು ಎಂಬುದು ಬಿಟ್ಟು
ಹೀನ ವಿಷಯಂಗಳನ್ನು ಜರಿದು
ಜ್ಞಾನಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ ಪ್ರಾಣಿ||೫||
ಸುತ್ತಲು ಬಂದು ದುರಿತಗಳೆಲ್ಲ ಕತ್ತರಿಸಿ ಕಡಿದು ಹಾಕುವ
ಹೆತ್ತ ತಾಯಿತಂದೆ ತವರು ಹತ್ತಿರ ಇದ್ದಾನೆ ಪ್ರಾಣಿ || ೬ ||
ಬಲ್ಲಿದ ಭಜಕರ ಹೃದಯದಲ್ಲಿ ನಿಂತು ಶ್ರೀಪುರಂದರ ವಿಠಲ
ಸೊಲ್ಲು ಸೊಲ್ಲಿಗವರ ಬಯಕೆ ಸಲ್ಲಿಸುತ್ತಿದ್ದಾನೆ ಪ್ರಾಣಿ||೭||
0 ಕಾಮೆಂಟ್‌ಗಳು