ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೋ - Dharmavemba Sambalava Galisikolliro

|| ದೇವರನಾಮ ||

ರಚನೆ : ಪುರಂದರ ದಾಸರು





ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೋ

ಪೆರ್ಮಯಿಂದ ದೇಹವ ನಂಬಬೇಡಿ ಕಾಣಿರೋ||


ಅಟ್ಟ ಅಡುಗೆ ಉಣಲು ಬಿಡನು ಕೊಟ್ಟ ಸಾಲ ಕೇಳಬಿಡನು

ಪೆಟ್ಟಿಗೆಯೊಳಿದ್ದ ಚಿನ್ನವ ತೊಟ್ಟೆನೆಂದರೆ ಯಮನು ಬಿಡನು||


ಅಕ್ಕನಿಲ್ಲಿ ಕರೆಯಲಿಲ್ಲ ಮಕ್ಕಳನ್ನು ಪಡೆಯಲಿಲ್ಲ

ದು:ಖಗೊಂಡ ಕಣ್ಣೀರನು ಉಕ್ಕಿಸಿದರೆ ಬಿಡನು ಯಮನು||


ಪೇಳ್ವೆ ನೆಂಟರಿಂಗೆ ಕರೆದು ಬೇಳೆ ಬೆಲ್ಲವನ್ನು ತಂದು

ನಾಳೆ ಮಗನ ಮದುವೆಯೆಂದು ತಾಳು ಎಂದರೆ ಯಮನು ಬಿಡನು||


ಮಾಳಿಗೆ ಮನೆಯಿರಲಿ ಜಾಳಿಗೆ ತುಂಬ ಹೊನ್ನಿರಲಿ

ಆಳು ಮಂದಿ ಶಾನೆಯಿರಲಿ ಕಾಲನು ತಾ ಬೆನ್ನ ಬಿಡನು||


ಅರ್ತಿಯಿಂದ ಸಂಸಾರವ ವ್ಯರ್ಥವಾಗಿ ನೆಚ್ಚಬೇಡಿ

ಕರ್ತೃ ಪುರಂದರವಿಠಲನ್ನ ಭಕ್ತಿಯಿಂದ ಭಜಿಸಿರೋ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು