|| ಲಕ್ಷ್ಮಿ ಹಾಡು ||
ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿ
ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ ॥ಪ॥
ಕರುಣಸಾಗರ ಹರಿತರುಣಿಯೆ ನೀ ಕೋಟಿ
ತರಣಿ ಕಿರಣ ರತ್ನಾಭರಣನಿಟ್ಟು
ಮಣಿಕೌಂಸ್ತುಭ ವಕ್ಷಸ್ಥಳದಲ್ಹೊಳೆಯುವ
ಸುಪರಣವಾಹನ ಲಕ್ಷ್ಮಿ ಶರಣು ವಂದಿತಳೆ ॥೧॥
ಪಂಕಜಾಕ್ಷಿ ಪಂಕಜೋದ್ಭವನ ಜನನಿ
ಪಂಕಜಮುಖಿ ಪಾಲಿಸೆ ಎನ್ನ
ಪಂಕಜನಾಭನ ಅಂಕದಲೊಪ್ಪುವ
ಪಂಕಜೆ ನಿನ್ನ ಪಾದಪಂಕಜಕೆರಗುವೆ ॥೨॥
ಮುಗುಳುನಗೆಯ ಮುತ್ತುಗಳು ಜಡಿತ ಕ-
ರ್ಣಗಳ ವಾಲೆಯು ಕದಪಿನಲಹಲ್ಹೊಳೆಯೆ
ಬಗೆ ಬಗೆ ಸರ ಬಂಗಾರವನಿಟ್ಟು ಮೂ-
ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ॥೩॥
ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ
ಬ್ಯಾಗ ನೋಡಿ ಪರಮೋತ್ಸವದಿ
ನಾಗಶಯನ ನಾಗಾರಿವಾಹನನ-
ರ್ಧಾಂಗಿ ಎನಿಸಿದಾನಂತ ಮಹಿಮಳೆ ॥೪॥
ಶೇಷಗಿರಿಯ ಶ್ರೀನಿವಾಸನ ಎದೆಯಲ್ಲಾ-
ವಾಸವಾಗಿರಲತಿ ಪ್ರೇಮದಲಿ
ಈಶ ನಾರದ ಬ್ರಹ್ಮಾಸುರರೊಡೆಯ ಭೀ-
ಮೇಶಕೃಷ್ಣನ ನಿಜ ದಾಸರಿಗ್ವರವೀಯೆ ॥೫॥
0 ಕಾಮೆಂಟ್‌ಗಳು