ಓಡೋಡಿ ಬನ್ನಿರೋ ರಾಮ ಶುಭ ಕಲ್ಯಾಣ - Ododi banniro rama shubha kalyana kannada lyrics


ಓಡೋಡಿ ಬನ್ನಿರೋ 


ಓಡೋಡಿ ಬನ್ನಿರೋ ರಾಮ ಶುಭ ಕಲ್ಯಾಣ

ರಾಮ ಶುಭ ಕಲ್ಯಾಣ, ನೋಡೋಣ ಬನ್ನಿರೋ॥ಪ॥ 


ಜನಕನ ಮಗಳಂತೆ ಹೆಸರು ಜಾನಕಿಯ೦ತೆ 

ಜಗದೊಳಾಕೆಯ ಸಮರಿಲ್ಲವಂತೆ 

ಶಿವ ಕೊಟ್ಟಾ ಧನುವಂತೆ ಪಣವಾಗಿಟ್ಟಿಹರಂತೆ 

ಧನು ಮುರಿದ ವೀರನ್ನಾಕೆ ವರಿಸುವಳಂತೆ॥ 

ಓಡೋಡಿ ಬನ್ನಿರೋ॥ 


ದೇಶ ದೇಶದಲ್ಲಿರುವ ಭುಮಿ ಪಾಲಕರೆಲ್ಲಾ 

ಧನುವ ನೋಡುತ್ತಾ ಕೈ ಬೆರಳ ಕಚ್ಚುವರ೦ತೆ 

ದಶರಥನ ಸುತನ೦ತೆ ಶ್ರೀ ರಾಮ ಹೆಸರ೦ತೆ

ಜಗದೊಳಗಾತನ ಸಮರಿಲ್ಲವ೦ತೆ॥

ಓಡೋಡಿ ಬನ್ನಿರೋ॥ 


ಕೌಶಿಕ ಯಾಗ ರಕ್ಷಣೇ ಮಾಡುತ್ತಾ 

ಶಿಲೇಯಾದ ಅಹಲ್ಯೆಯ ಸಲಹಿದನಂತೆ 

ಸರಯು ನದಿಯ ದಾಟಿ ಮಿಥಿಲ ಪುರವ ಸೇರಿ 

ನೆರೆದ ರಾಜೊರಳೆಲ್ಲಾ ರವಿಯ೦ತೆ ಹೊಳೆದನ೦ತೆ॥

ಓಡೋಡಿ ಬನ್ನಿರೋ॥ 


ಇಟ್ಟ ಧನುವನಾತ ಥಟ್ಟನೆ ಮುರಿಯುತ್ತ 

ದಿಟ್ಟ ರಾಜೊರಳೆಲ್ಲಾ ಘಟ್ಟಿಯೆನಿಸಿದನಂತೆ 

ಸುರರು ಸಂತಸ  ತಳೆಯೆ ಅಸುರರ ಎದೆ ಬಿರಿಯೆ 

ಆ ಶಿವ ಧನುವ ಆ ಕ್ಷಣವೇ ಮುರಿದನ೦ತೆ ॥

ಓಡೋಡಿ ಬನ್ನಿರೋ॥ 


ದೇವ ದು೦ದುಭಿ ಮೊರೆಯೆ ಜಯ ವಾದ್ಯ ಭೊರ್ಗರೆಯೆ 

ಜನಕ ರಾಜನು ಸ೦ತಸವ ತಾಳಿದನಂತೆ 

ಜಾಜಿ ಸಂಪಿಗೆ ಪಾರಿಜಾತ ಮಲ್ಲಿಗೆ ಮೊಗ್ಗಿನ

ಹಾರವ ಹಿಡಿದು ವೈಯಾರಿ ನಿ೦ತಿಹಳ೦ತೆ ॥

ಓಡೋಡಿ ಬನ್ನಿರೋ।॥ 


ಶೃಂಗಾರವಾಗಿಹ ರಂಗ ಮಂಟಪ ಇಳಿದು 

ಮುಗಿಲ ಮಿಂಚಿನ೦ತೆ ಹೊಳೆಯುತ್ತ ಬಂದಳಂತೆ 

ಲಾಜ ದಕ್ಷತೆ ವಿಪ್ರರಾಶೀರ್ವಚನಾದಿ 

ರಾಮರ ಕೊರಳೊಳು ಹಾರ ಹಾಕುವಳ೦ತೆ ॥|

ಓಡೋಡಿ ಬನ್ನಿರೋ॥ 


ಸೀತೆ ಶ್ರೀ ಲಕ್ಷ್ಮಿ ಶ್ರೀ ರಾಮ ನಾರಾಯಣ 

ಶ್ರೀ ಸೀತಾ ರಾಮರ ಲಗ್ನಕ್ಕೆ ಹೊಗುವ ಬನ್ನಿ 

ಹಬ್ಬ ಮಾಡುವ ಬನ್ನಿ ಉಬ್ಬಿ ಕುಣಿಯುವ ಬನ್ನಿ 

ಶ್ರೀ ರಾಮರ ಪದವ ಹೇಳುವ ಬನ್ನಿ ॥

ಓಡೋಡಿ ಬನ್ನಿರೋ॥ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು