|| ಶಾರದಾದೇವಿ ಸ್ತುತಿ ||
ಶಾರದ ದೇವಿಯೆ ಕೈಗಳ ಮುಗಿವೆ
ಕರುಣವ ನೀಡುತ ಸಲಹಮ್ಮ ।
ಮರೆಯದರೀತಿಲಿ ವಿದ್ಯೆಯ ಬೋಧಿಸಿ
ಕಲಿಯಲು ಜ್ಞಾನವ ನೀಡಮ್ಮ ॥ ಪ ॥
ಕರದಲಿ ವೀಣೆಯು ಕೊರಳಲಿ ಹಾರವು
ಶಿರದಲಿ ಹೊನ್ನಿನ ಮಕುಟವ ಧರಿಸಿಹೆ |
ಮಧುಕರ ವಾಣಿಯೇ ಬ್ರಹ್ಮನ ರಾಣಿಯೇ
ಶ್ರೀಶನ ಸೊಸೆಯೇ ನಿನ್ನನು ಬೇಡುವೆ ॥
ಧರೆಯೊಳು ಕಾಶ್ಮೀರಪುರದೊಳು
ಇರುವಳೆ ಶಂಕರಗೊಲಿದು ಶೃಂಗೇರಿಗೆ ಸರಿದಳೆ ||
ನಾಲಿಗೆ ತೊಡರ ಬಿಡಿಸುತ ಎಮ್ಮಯ,
ಸುತರನು ಕಾಯೈ ಸುಂದರಮುಖಿಯೆ ॥
ನಂಬಿಕೆ ಹೊಂದಿಹೆನೆಂಬುವ ಭಕ್ತರ
ಚಂದದಿ ಲಾಲಿಸಬೇಕಮ್ಮ ।
ತೋರುತ ನಿನ್ನಯ ಚಿನ್ಮಯ ರೂಪವ
ನಿರುತವು ಪಾಲಿಸಬೇಕಮ್ಮ ॥
ಭಕುತರ ಕಾಯವ ವೀಣೆಯ ಮಾಡಿ
ನಿಗಮಾಗಮದ ಶ್ರುತಿಯಲಿ ಸೇರಿ ।
ವೇದ ಸುನಾದದ ಸರಿಗಮ ನುಡಿಸುತ
ಕಾಮ ಕ್ರೋಧದ ಅಪಸ್ಪರ ಬಿಡಿಸೌ ॥

0 ಕಾಮೆಂಟ್‌ಗಳು