ಶ್ರೀ ಶಂಕರಾಚಾರ್ಯ ಸ್ತುತಿ - ಶ್ರೀಮಚ್ಛಂಕರ ಭಗವತ್ಪಾದರ ಕೋಮಲ ಪದಗಳಿಗೆರಗುವೆವು, Srimachhankara Bhagavatpadara

 || ಶ್ರೀ ಶಂಕರಾಚಾರ್ಯ ಸ್ತುತಿ ||



ಶ್ರೀಮಚ್ಛಂಕರ ಭಗವತ್ಪಾದರ

ಕೋಮಲ ಪದಗಳಿಗೆರಗುವೆವು 

ಆ ಮಹಿಮರ ಪರಮಾನುಗ್ರಹದಿಂ

ತಾಮಸವಳಿಯಲು ಭಜಿಸುವೆವು ||೧||


ಧರೆಯೊಳು ದುರ್ಮತಗಳ ದೆಸೆಯಿಂದಲಿ

ನರಜನವು ಕ್ಷೀಣಿಸುತಿರಲು 

ಸುರತತಿ ಮೊರೆಯಿಡೆ ಶಿವಗುರು

ಸುರನಾಗಿರಲು ಬ೦ದ ಶಿವನಾಗಿರುವ ||೨||


ಕಾಲಟಿ ಗ್ರಾಮದಿ ಪೂರ್ಣೆಯ ತೀರದಿ

ಕಾಲಧ್ವಂಸಿಯು ಅವತರಿಸೆ 

ಎಲ್ಲೆಡೆ ಹಬ್ಬಿತು ಶಾಂತಿಯು

ಸುಜನರಿಗೆಲ್ಲರಿಗಾಯಿತು ಸಂತಸವು ||೩||


ಹಳೆಯ ಪಾಠಗಳನೋದಿದ ಮಾತ್ರದಿ

ತಿಳಿದುಕೊಳ್ಳುವಾ ರೀತಿಯಲಿ 

ಎಳೆಯತನದೊಳಗೆ ಕಲೆಗಳನೆಲ್ಲವ

ತಿಳಿದು ಮಹಿಮೆಯನು ತೋರಿಸಿದ ||೪||


ಗತಿಯಿಲ್ಲದೆ ನೆಲ್ಲಿಯ ಕಾಯೊಂದನು

ಹಿತದಿ ಭಿಕ್ಷವಿಡೆ ಕರುಣದೊಳಾ-

ಸತಿಗೆ ಸುವರ್ಣದ ನೆಲ್ಲಿಯಿತ್ತು ಚಿತ್‌

ಸ್ಠಿತಿಯೊಳಗಾಕೆಯ ನಿಲ್ಲಿಸಿದ ||೫||


ಮುದುಕಿಯಾದ ತಾಯಾರ್ಯಾಂಬಿಕೆ ತಾಂ

ನದಿಗೆ ಹೋಗುವುದಕಾಗದಿರೆ 

ನದಿಯನೆ ಮನೆಯ ಸಮೀಪಕೆ ತಿರುಗಿಸಿ

ಮುದದಿಂ ತಾಯಿಗೆ ವಂದಿಸಿದ ||೬||


ಜನಪನ-ನಾಟಕಗಳ ತಾ ಲಾಲಿಸಿ

ಮನದೊಳು ಸಂತಸವನು ತಳೆದು

ಜನಪಾಲಕನಿಷ್ಟಾರ್ಥವನರಿಯು

ತ್ತನುರೂಪದ ತನಯನನಿತ್ತ ||೭||


ನದಿಯಿಂ ಕೃಷ್ಣನ ಮೂರ್ತಿ 

ಚಲಿಸುತಿರಲದ ಕಂಡಾದರದಿಂದದನು 

ಪದುಳವಾಗಲಾ ತಾಯ ಮನಸ್ಸಿಗೆ

ಮುದದಿಂ ಮನೆಯೊಳು ಸ್ಥಾಪಿಸಿದ ||೮||


ಕ್ಷಿತಿಯುದ್ಧಾರವ ಮಾಡಿ ಮತ್ತೆ 

ಸದ್ಗತಿಯನು ಸಂಪಾದಿಸುವುದಕೆ

ಯತಿಪದವುತ್ತಮವೆಂಬುದ ತೋರಲು 

ಯತಿಧರ್ಮವನನು ವರ್ತಿಸಿದ ||೯||


ನಾರಾಯಣ ಪರಮೇಷ್ಠಿ ವಸಿಷ್ಠರು 

ಸೇರಿ ಬಂದ ಗುರುಕುಲದೊಳಗೆ 

ರಾರಾಜಿಪ ಗೋವಿಂದಯತೀಂದ್ರರ

ಸೇರಿ ಶಿಷ್ಯರೆಂದೆನಿಸಿರ್ದ ||೧0||


ಉಕ್ಕಿಬರಲು ನರ್ಮದೆ ಜನರೆಲ್ಲರು

ಸಿಕ್ಕಿರೆ ಕಷ್ಟದೊಳದ ನೋಡಿ 

ಗಕ್ಕನೆ ತಮ್ಮ ಕಮಂಡಲದೊಳಗದನಿಕ್ಕಿ

ಮಹಿಮೆಯನು ತೋರಿಸಿದ ||೧೧||


ಗುರುಪರಂಪರಾ ಪ್ರಾಪ್ತವಾಗಿ

ಬಂದಿರುತ ಮೆರೆವ ಶಶಿಶೇಖರನ 

ವರದ ರತ್ನ ಗರ್ಭಾಭಿದಗಣಪನ

ಪರಮ ಪ್ರೀತಿಯಿಂದರ್ಚಿಸಿದ ||೧೨||


ಶರಿರಕೆ ಹೊರತಹ ಚೈತನ್ಯವೆ ತನ್ನಿ-

ರವೆಂದರಿತಂತ್ಯಜನನ್ನು 

ಗುರುವೆನ್ನುತ ತಾನರಿದಿಹ

ನಿಷ್ಠಾಭರದಿಂ ಶಿವನನು ಮೆಚ್ಚಿಸಿದ ||೧೩||


ಉರು ಸಂಸಾರಾರ್ಣವವನು ದಾಟಿಪ

ಗುರುವಿಗೆ ನದಿಯೆಷ್ಪರದೆನುತ

ನೆರೆಬಂದ ಸನಂದರನು ಪದ್ಮಪಾದರ

ಗೈಯುತ ಕಡೆ ಹಾಯಿಸಿದ ||೧೪||


ವ್ಯಾಸರು ಸಾಕ್ಷಾದ್ದರ್ಶನವನು

ಕೊಟ್ಟಾ ಸಮಯದಿ ಸಿದ್ಧಾಂತವನು

ಭಾಸುರಮಾದೀ ಶಾಂಕರ ಭಾಷ್ಯವ

ಲೇಸಾಗಿಹುದೆನೆ ರಚಿಸಿರುವ ||೧೫||


ಮಂಡನಮಿಶ್ರರ ಕರ್ಮ ಜಡತ್ವವ

ಖಂಡಿಸಿ ತತ್ತ್ವಜ್ಞಾನವನು

ತಂಡತಂಡದಾಧಾರಗಳಿಂ

ಭೂಮಂಡಲವರಿಯಲು ಸಾಧಿಸಿದ ||೧೬||


ನೆರೆ ದೂರ್ವಾಸರ ನೋಡೆ ನಕ್ಕುದಕೆ

ನರಳಾಗಿರ್ದುದ ತಾ ಕಳೆದು

ವರಭಾರತಿಯನ್ನಾ ಶೃ೦ಗೇರಿಯೊಳಿರು-

ವಂತೊಲವಿಂದೊಪ್ಪಿಸಿದ ||೧೭||


ಕಾಪಾಲಿಕ ಜನರಳುಕುವಂತೆ ತಾಂ

ಕೋಪಾವಿಷ್ಟ ನೃಸಿಂಹನನು

ಆ ಪದ್ಮಪಾದಾಭಿದರೊಳು ತೋರಿಸಿ

ಪಾಪಾಚರಣೆಯ ನಿಲ್ಲಿಸಿದ ||೧೮||


ನೀನಾರೆನಲಾ ಮೂಕನು ಆಗಲೆ

ಕಾಣುವ ಹಸ್ತಾಮಲಕದವೊಲ್‌

ತಾನಾ ಬ್ರಹ್ಮಣೆನಲು ದರ್ಶನದಿಂದೇ -

ನಹುದೆಂಬುದ ತೋರಿಸಿದ ||೧೯||


ಮುಖಸಂದರ್ಶನವಾಗುತ್ತಲೆ ಆ

ಸುಖದಿಂ ತೋಟಕ ವೃತ್ತದೊಳು 

ಪ್ರಕಟವಾಗಿ ನುತಿಗೈದವರಿಗೆ ತಾಂ

ತೋಟಕರೆನುತಾಶ್ರಯವನು ಕೊಟ್ಟ ||೨೦||


ತಾಯಿಯು ತನ್ನನು ನೆನೆವಳೆಂದು

ಬಂದಾ ಯತಿ ಸಂಸ್ಕಾರವ ತಾನು

ತಾಯಿಗೆ ಸಲ್ಲಿಸಿ ವಿಶೇಷಾದರದಿ

ತಾಯ ಋಣವ ತಾ ತೀರಿಸಿದ ||೨೧||


ಕಾಮಾಕ್ಷೀ ದೇವಾಲಯದೊಳಗತಿ

ನೇಮದಿಂದ ಶ್ರೀಚಕ್ರವನು 

ಪ್ರೇಮದಿ ನೆಲೆಗೊಳಿಸುತ್ತಾ ಶಾಕ್ತರ

ತಾಮಸವಳಿಯಲು ಬೋಧಿಸಿದ ||೨೨||


ಜನರು ಸಂಕುಚಿತ ಬುದ್ಧಿಯುಪಾಸನೆಯನು

ಬಿಡುವಂತುಪದೇಶಿಸುತ 

ಅನುವಿಂ ಷಣ್ಮತಗಳ ಸಂಸ್ಥಾಪಿಸಿ

ಘನತರವಹ ಕೀರ್ತಿಯ ಪಡೆದ ||೨೩||


ಭರತ ಖಂಡದಾದ್ಯಂತವ

ಧರ್ಮೋದ್ಧರಣೆಗಾಗಿಯೆ ತಿರುತಿರುಗಿ

ಪರಮಾರ್ಥವನಾ ಜನಸಮುದಾಯಕೆ

ಪರಿಪರಿಯಿಂದಲಿ ಬೋಧಿಸಿದ ||೨೪||


ರಾಜರಿಗೆಲ್ಲರಿಗಾ ಸಿದ್ಧಾಂತದ

ನೈಜಾರ್ಥವ ಮನಗಾಣಿಸುತ

ರಾಜ ರಾಜ ಕೋಟೀ ರತ್ನ

ನೀರಾಜಿತ ಪದಯುಗನಾಗಿರುವ ||೨೫||


ವೇದವೆಂಬ ಪಾಲ್ಗಡಲನು ಕಡೆಯುತ 

ಸಾಧಿಸಿ ಅದ್ವೈತಾಮೃತವ

ಮೋದದಿ ಕೊಡುತಾ ಶಿಷ್ಕಸಮೂಹದ

ಖೇದವ ನಿರ್ಮೂಲವ ಗೈದ ||೨೬||


ಜೀವಬ್ರಹ್ಮರಿಗೈಕ್ಯವ ಸಾಧಿಸಿ

ಜೀವತ್ವದ ಬಿಡುಗಡೆಗಾಗಿ

ಸಾವಿರಾರು ಸಾಧನಗಳ ವಿವರಿಸಿ

ಜೀವರ ದುಃಖವ ತೊಲಗಿಸಿದ ||೨೭||


ಬ್ರಹ್ಮವೊಂದೆ ಸೃಷ್ಟಿಗೆ ಮೊದಲು 

ಬ್ರಹ್ಮವೊಂದೆ ಸತ್‌ ಎನಿಸುವುದು

ಬ್ರಹ್ಮವೊಂದೆ ಸರ್ವಾಧಾರವೆನುತ

ಬ್ರಹ್ಮಲಕ್ಷಣವ ವಿವರಿಸಿದ ||೨೮||


ಹಾವಿನ ರೂಪವು ಹಗ್ಗದಿ ತೋರುವ

ಭಾವದಂತೆಯೇ ಈ ಜಗವು 

ಭಾವಿಸಲಾ ಬ್ರಹ್ಮದಿ ತೋರುವುದೆಂಬೀ -

ವಿವರವ ಮನಗಾಣಿಸಿದ ||೨೯||


ತೋರುತಿರುವೀ ನಾಮರೂಪಗಳು 

ತೋರುತ್ತಿರಲಿಲ್ಲವು ಮೊದಲು

ತೋರದೆ ಪೋಪವು ಮುಂದೆಯು ಅವುಗಳ 

ಸಾರವಿದೆಂಬುದ ತೋರಿಸಿದ ||೩೦||


ಭ್ರಾಂತಿಗೆ ಕಾರಣ ಮಾಯೆಯೆನಿಪುದ -

ದನಂತರಂಗದಿದೋಡಿಸಲು

ಸಂತತವುಂ ಬ್ರಹ್ಮನ ಭಜಿಸೆನ್ನುತ

ಸಂತಸದಿ೦ ಜನರಿಗೆ ಪೇಳ್ದ ||೩೧||


ಸುಲಭ ಶೈಲಿಯಿಂ ಪಾಮರ ಜನರುಂ

ಬಲಿದ ವಿಷಯದಿಂ ಪಂಡಿತರುಂ

ತಲೆದೂಗುತ ಮುಳುಗಲು ಗ್ರಂಥಂಗಳ

ಜಲಧಿಯೊಳ್‌ ಪೊಸತೆನೆ ನಿರ್ಮಿಸಿದ ||೩೨||


ಬಡಗಣ ಬದರಿಯೊಳಂತೆಯೆ ತೆಂಕಣ

ಎಡೆಯೊಳಗಾ ಶೃಂಗೇರಿಯೊಳು 

ಪಡುವಣ ದ್ವಾರಕೆ ಮೂಡಣ ಪುರಿಯೊಳು

ತಡೆಯದೆ ಮಠಗಳ ಸ್ಥಾಪಿಸಿದ || ೩೩ ||


ಧರ್ಮಮಂಟಪಕೆ ನಾಲ್ಕುಸ್ತಂಭಗಳು

ಪೆರ್ಮೆಯಂತೆ ನಾಲ್ದೆಸೆಯಲ್ಲಿ 

ಧರ್ಮದ ಶಿಕ್ಷೆಯೊಳ್‌ ನಾಲ್ಕು ಮಠಂಗಳ

ನಿರ್ಮಿಸಿ ಧರ್ಮವ ರಕ್ಷಿಸಿದ || ೩೪||


ಉತ್ತರದಲಕಾನಂದಾ ತಟದಲಿ

ಜ್ಯೋತಿರ್ಮಠದಲಿ ತಾ ನೆಲಸಿ

ಉತ್ತಮವಾದದ್ದೆ ಚತದ ಬೀಜವ

ಬಿತ್ತಿದರೆಲ್ಲೆಡೆ ತೋಟಕರು || ೩೫ ||


ಗುರುವಾಣತಿಯೊಳು ಹಸ್ತಾಮಲಕರು

ಪುರಿ ಗೋವರ್ಧನ ಪೀಠವನು

ಆರೋಹಿಸುತದದ್ವೆತದ ಧರ್ಮದ

ಸಾರವನೆಲ್ಲೆಡೆ ಸಾರಿದರು || ೩೬ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು