ತತ್ವ ವಿಚಾರ ಪ್ರಕರಣ - ಶಿವ ಜೀವರು ಎಂದೆರಡಿಲ್ಲಾ, Shiva Jeevaru Enderadilla

|| ತತ್ವ ವಿಚಾರ ಪ್ರಕರಣ ||


kannadabhajanlyrics.blogspot.com
kannadabhajanlyrics.blogspot.com



ಶಿವ ಜೀವರು ಎಂದೆರಡಿಲ್ಲಾ |

ಪರಶಿವಮಯವೇ ಈ ಜಗವೆಲ್ಲಾ |

ಭವ ಕಾನನವನು ದಹಿಸುವ ಮಂತ್ರವ |

ಭುವನದಿ ಗುರುಪುತ್ರನೆ ಬಲ್ಲ ॥ಪ॥


ದಾನವ ಮಾಡಿದರೇನುಂಟು

ಬರಿ | ಮೌನದೊಳಿರ್ದೊಡದೇನುಂಟು |

ಜ್ಞಾನದಿ ವಸ್ತುವನರಿತೊಡೆ ಸಾಕು।

ಪಮಾನಕೆ ಸಿಲುಕದ ಸುಖವುಂಟು ||೧||


ನದಿಯೊಳು ಮುಳುಗಿದರೇನುಂಟು |

ಬಳಿ। ಕದರಿಂ ನಡುಗುವ ಛಳಿಯುಂಟು।

ಸದಮಲ ವಸ್ತುವೆ ತಾನೆಂದರಿತೊಡೆ |

ಅದು ನಿತ್ಯಾನಂದದ ಗಂಟೂ || ೨ ||


ವೇದಗಳೋದಿದರಲ್ಲೇನು। ಬಿಳಿ।

ಬೂದಿಯ ಬಳಿದರು ಯಮ ಬಿಡನು |

ಭೇದವು ತೋರದೆ ವಿಮಲ ಜ್ಞಾನವ।

ಸಾಧಿಸಿದರೆ ಶಿವನಾಗುವನೂ ||೩||


ಉತ್ತಮ ಕರ್ಮವ ಗೈದವರೂ। ಕೇಳ್‌।

ಮತ್ತೀ ಧರಣಿಗೆ ಬರುತಿಹರು |

ಸತ್ಯದ ಮರ್ಮವನರಿತಿಹ ಧೀರರು |

ನಿತ್ಯಾನಂದದಿ ಬೆರೆಯುವರೂ ||೪|| 


ದೇಶವ ಸುತ್ತಿದರೇನಿಲ್ಲ ಭವ।

ಕಾಶಿಯೊಳಿದ್ದರೂ ಬಿಡದಲ್ಲ।

ಈ ಸಕಲವು ಪುಸಿಯೆಂದರಿತೊಡೆ।

ಜಗದೀಶನೆ ತಾನಾಗುವನಲ್ಲ ||೫||


ನಂದನರಿಂದಲು ಭವ ಕೆಡದು |

ಸಂಧ್ಯಾ | ವಂದನೆ ನಿಜಮುಕ್ತಿಯ ಕೊಡದು |

ಕುಂದದೆ ಶಿವ ತಾನೆಂದರಿತೊಡೆ।

ಆನಂದವು ಬೇಡೆಂದರು ಬಿಡದೂ ||೬||


ಉರುತರ ಕರ್ಮವ ಗೈದವರೂ। ಕೇಳ್‌।

ಪರಿಪರಿ ಯಜ್ಞದ ದೀಕ್ಷಿತರು |

ಮರವೆಯು ತೋರದೆ | ನಿಜಸುಖದೊಳಗಿಹ।

ಗುರುಪುತ್ರರ ಪದ ಕಿಂಕರರೂ ||೭||


ಘಂಟೆಯ ಬಡಿದರು ಗುಡಿಯಲ್ಲಿ | ಯಮ।

ಭಂಟರು ಬೇರೆ ಬಿಡರಿಲ್ಲಿ |

ಕಂಟಕವೆನಿಸಿದ ಮಾಯೆಯ ಕಳೆದರೆ।

ಗಂಟಾಗುವುದದು ಪರದಲ್ಲಿ  ||೮||


ಎರಡೆಂಬುವನಿಗೆ ಕಡೆಯಿಲ್ಲ | ಈ ।

ಧರಣಿಗೆ ಬರುವುದು ಬಿಡದಲ್ಲ

ಗುರು ಶಂಕರನಡಿಗಳ ಹಿಡಿದವರಿಗೆ!

ಮರಳೀ ಸಂಸ್ಕೃತಿ ಭಯವಿಲ್ಲ ॥ ೯ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು