ದುರ್ಜನರ ಸಂಗ ಎಂದಿಗೊಲ್ಲೆನು ಹರಿಯೆ - Durjanara Sanga Endigoallenu Hariye

|| ಹರಿ ಸ್ತುತಿ ||




ದುರ್ಜನರ ಸಂಗ ಎಂದಿಗೊಲ್ಲೆನು ಹರಿಯೆ

ಇಂಥ ಸಜ್ಜನರ ಸಂಗದೊಳಗಿರಿಸೆನ್ನ ರಂಗ


ಉಂಡ ಮನೆಗೆರಡ ಎಣಿಸುವಾತನ ಸಂಗ

ಕೊಂಡೆಯವ ಪೇಳಿ ಕಾದಿಸುವನ ಸಂಗ

ತಂದೆ ತಾಯನು ಬೈದು ಜರಿದು ಬಾಧಿಸುವನ ಸಂಗ

ನಿಂದಕರ ಸಂಗ ಬಹುಭಂಗ ರಂಗ


ನಂಬಿದ ಠಾವಿನಲಿ ಕೇಡನೆಣಿಪನ ಸಂಗ

ಸಂಭ್ರಮದಿ ಜಗಳ ಕಾಯುವನ ಸಂಗ

ಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗ

ರಂಭೆ ಸ್ತ್ರೀಯರ ನೋಡಿ ಮೋಹಿಪನ ಸಂಗ


ಕುಳಿತಿಹ ಸಭೆಯೊಳು ಕುಹಕ ಮಾಡ್ವನ ಸಂಗ

ಬಲುಬೇಡೆ ಕೊಡದಿಹ ಲೋಭಿ ಸಂಗ

ಕುಲಹೀನರ ಕೂಡೆ ಸ್ನೇಹ ಬೆಳಿಪನ ಸಂಗ

ಹಲವು ಮಾತಾಡಿ ಆಚರಿಸಿದವನ ಸಂಗ


ಗುರುಸತಿಗೆ ಪರಸತಿಗೆ ಎರಡು ಎಣಿಪನ ಸಂಗ

ಗುರುನಿಂದೆ ಪರನಿಂದೆ ಮಾಳ್ಪನ  ಸಂಗ

ಪರಹಿತಾರ್ಥದ ಧರ್ಮ ಪಡೆಯದಾತನ ಸಂಗ

ಇಂಥ ಪರಮ ಪಾಮರರ ಸಂಗ ಬಹುಭಂಗ ರಂಗ


ಆಗಮ ಮಹಾತ್ಮೆಯನು ಅರಿಯದಾತನ ಸಂಗ

ಯೋಗಿಜನ ಗುರುಗಳನು ನಿಂದಿಪನ ಸಂಗ

ರಾಗದ್ವೇಷಾದಿಯಲಿ ಮುಣುಗೇಳುವನ ಸಂಗ

ಕಾಗಿನೆಲೆಯಾದಿ ಕೇಶವ ಬಿಡಿಸೀ ಭಂಗ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು