ಗುರು ಮಂಗಳಂ - ಶ್ರೀಮತ್ಸದ್ಗುರು ಪರಮ ಹಂಸಯತಿ, Shrimad Sadguru Paramhamsa Yathi

 || ಗುರು ಮಂಗಳಂ ||






| ಶ್ರೀಮತ್ಸದ್ಗುರು ಪರಮ ಹಂಸಯತಿ |

ಸಮರ್ಥ ನರಸಿಂಹ ಸರಸ್ವತಿಯೋ |

ನೇಮಿಸಿರುವ ತಾ ಮೊದಲೇ ಬಂದು

ಕ್ಷೇತ್ರ ಗಾಣಿಗಾಪುರದಲಿಯೋ

ಪ್ರೇಮಭಾವದಿಂದ ಬರುವ ದಾಸರಿಗೆ |

ಕಾಮ ಪೂರೈಸುವ ಈ ದೊರೆಯೋ |

ನಾಮ ತನ್ನದು ನೆನೆಯುವವರಿಗೆ |

ನಿಜಸುಖ ಕೊಡುವನು ಹರುಷದಿಯೋ |

ಮಂಗಳಾ ಜಯ ಮಂಗಳಾ ||೧||



ಮಂಗಳದಾರತಿ ದೇವಗಿದೊ |

ಶುಭ ಮಂಗಳದಾರತಿ ಗುರುವಿಗಿದೋ |

ಮಂಗಳಾ ಜಯ ಮಂಗಳಾ |

ದಿವ್ಯ ಪಾದುಕಾ ಸುವರ್ಣಮಯದವು

ಚರಣ ಕಮಲದಲಿ ತೋರುವುವೋ |

ದೇವಾಸುರರು ಗಣ ಗಂಧರ್ವರು |

ಪೂಜಿಸುವಂತಹ ಪಾದುಕವೋ |

ಭವಮೋಚನಕಿದೇ ದರ್ಶನಾಗುವುದೂ |

ಪಾದುಕವೋ ಇವು ತಾರಕವೋ |

ಮಂಗಳಾ ಜಯ ಮಂಗಳಾ ||೨||


ವೇಷವೆಂಥದು ಸ್ವಾಮಿದು ನೋಡಿರೋ

ಚಾತುರ್ಥಾಶ್ರಮಕೊಪ್ಪುವುದೋ |

ಕಾಷಾಯಾಂಬರ ಭೂಷಿತನಾಗಿ |

ದಂಡ ಕಮಂಡಲು ಧರಿಸಿಹನೋ |

ಭಸ್ಮೋದ್ಧೂಳಿತ ಸರ್ವಾಂಗದಲಿ |

ಶೋಭಿಸುವಂಥ ದೇವಿವನೋ |

ಭೂಷಣಕೆಲ್ಲಾ ರುದ್ರಾಕ್ಷಿಡುವನು |

ಯೋಗಿ ರಾಜ ಮಹಾ ಪುರುಷವನೋ |

ಮಂಗಳಾ ಜಯ ಮಂಗಳಾ ||೩||


ಶ್ಯಾಮಲವರ್ಣ ಅತಿ ಸುಂದರ ಮೃದುತನು |

ಪೂರ್ಣ ಚಂದ್ರ ಸಮ ಮುಖ ಕಳನೋ 

ಕಮಲಾಕರ ಪ್ರಭು ಕಮಲ ನಯನ ಗುರು |

ನಾಸಿಕ ಸಂಪಿಗೆ ದಳ ಸಮನೋ |

ಸುಮನಸ ಸರಗಳು ಜಾಜಿ ಮಲ್ಲಿಗೆ |

ಕೊರಳೊಳಗೊಪ್ಪುವ ಬಹುಪರಿಗೋ |

ನೇಮದಿ ನಿತ್ಯ ಈ ಪರಿ ಧ್ಯಾನಿಸಿ |

ಮನದಲಿ ಪೂಜಿಸಬೇಕಿವನ |

ಮಂಗಳಾ ಜಯ ಮಂಗಳಾ ||೪||


ಕೇಸರಿ ಗಂಧ ಹಣೆ ಮೇಲ್ಹಚ್ಚಿ |

ಕಸ್ತೂರಿಯ ಮೇಲೆ ತಿಲಕವನೋ |

ಕುಸುಮ ಸೇವಂತಿಗೆ ತುಲಸಿ ಬಿಲ್ವದಳ |

ಏರಿಸುವರು ಗುರುಸ್ವಾಮಿಗಿದೋ |

ಘೋಷಾಗುವುದು ವೇದಮಂತ್ರಗಳು |

ಆರತಿ ಆದ ನಂತರನೋ |

ಈಶ ಜಗದ್ಗುರು ದತ್ತ ಭಕ್ತರನು 

ರಕ್ಷಿಸುವನು ಬಹುಪರಿ ಇವನೋ |

ಮಂಗಳಾ ಜಯ ಮಂಗಳಾ ||೫||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು