|| ದೇವಿ ಸ್ತುತಿ ||
ರಾಗ : ಮಧ್ಯಮಾವತಿ
ಅಮ್ಮ ನಮ್ಮಮ್ಮ ಬಾರಮ್ಮ
ನಮ್ಮ ತಾಯಿ ಬಾರಮ್ಮ
ಅಮ್ಮ ನಮ್ಮಮ್ಮ ಬಾರಮ್ಮ
ನಮ್ಮದೇವಿ ಬಾರಮ್ಮ ||ಪ||
ಮೂರು ಲೋಕದೊಡೆಯ
ಶಿವನರಾಣಿಯೆ ಬಾರಮ್ಮ
ಗೆಜ್ಜೆಯ ನಾದವ ಘಲು ಘಲು ಎನ್ನುತ
ಮಂಗಳ ವಾಹಿನಿ ಬಾರಮ್ಮ || ೧ ||
ಶಂಕರ ಸ್ಥಾಪಿತ ಶ್ರೀಚಕ್ರ ಪೂಜಿತೆ
ಶಾರದ ದೇವಿಯೆ ಬಾರಮ್ಮ
ಶೃಂಗೇರಿಯಲ್ಲಿ ನಗುನಗುತಿರುವ
ಭಾರತೀ ದೇವಿಯೆ ಬಾರಮ್ಮ ||೨||
ನವರಾತ್ರಿದೇವಿ ಮೂಲ ಸರಸ್ವತೀ
ಅಷ್ಟಮಿ ದುರ್ಗಿಯೆ ಬಾರಮ್ಮ
ವಿಜಯದಶಮಿಯೋಳ್ ವಿಜಯಂಗೈಯ್ಯುವ
ವಿಜಯಲಕ್ಷ್ಮಿಯೆ ಬಾರಮ್ಮ ||೩||
ಶ್ರೀಸಿರಿಲಕ್ಷ್ಮೀ ವರ ಸಿರಿಲಕ್ಷ್ಮೀ
ಭಾಗ್ಯದ ಲಕ್ಷ್ಮಿಯೆ ಬಾರಮ್ಮ
ಶ್ರಾವಣ ಮಾಸದಿ ಪೂಜಿಸಲ್ಪಡುವ
ವರಮಹಾಲಕ್ಷ್ಮಿಯೆ ಬಾರಮ್ಮ
ಬಾಧ್ರಪದ ಮಾಸದಿ ಪೂಜಿಸಲ್ಪಡುವ
ಸ್ವರ್ಣ ಗೌರಿಯೆ ಬಾರಮ್ಮ || ೪ ||
ಕಂಚಿ ಕಾಮಾಕ್ಷಿ ಮಧುರೆ ಮೀನಾಕ್ಷಿ
ಕಾಶಿ ವಿಶಾಲಾಕ್ಷಿಯೆ ಬಾರಮ್ಮ
ಕಾಮಿತ ಫಲಗಳ ನೀಡುವಂತ
ಕರುಣಾದೇವಿಯೆ ಬಾರಮ್ಮ ||೫||
ಕಾಮಾಕ್ಷಿದೇವಿ ಮೀನಾಕ್ಷಿದೇವಿ
ಇಂದ್ರಾಕ್ಷಿದೇವಿಯೆ ಬಾರಮ್ಮ
ಮೈಸೂರು ನಗರದಿ ಸ್ಥಿರವಾಗಿ ನೆಲೆಸಿಹ
ಚಾಮುಂಡೇಶ್ವರಿ ಬಾರಮ್ಮ ||೬||
ಗಜಮುಖಜನನಿಯೆ ಧೀರಗಂಭೀರೆಯೆ
ಗಾಯತ್ರಿ ದೇವಿಯೆಬಾರಮ್ಮ
ಅಂಬಾಭವಾನಿಯೆ ದುರ್ಗಾಭವಾನಿಯೆ
ಗಂಗಾಭವಾನಿಯೆ ಬಾರಮ್ಮ ||೭||
ಖಡ್ಗಧಾರಿಣಿ ತ್ರಿಶೂಲಪಾಣೆ
ಚಾಮುಂಡೇಶ್ವರಿ ಬಾರಮ್ಮ
ರಾಜದಿರಾಜರಿಂ ಪೂಜಿಸಲ್ಪಡುವ
ರಾಜರಾಜೇಶ್ವರಿ ಬಾರಮ್ಮ ||೮||
ಹಾಸನ ದೇವತೆ ಶ್ರೀಚಂದ್ರ ಲೇಪಿತೆ
ಕುಂಕುಮ ಅರ್ಚಿತ ಬಾರಮ್ಮ
ಹಾಸನ ನಗರದಿ ಸ್ಥಿರವಾಗಿ ನೆಲೆಸಿಹ
ಹಾಸನಾಂಬೆಯೆ ಬಾರಮ್ಮ ||೯||
ಮಂಗಳ ರೂಪಿಣಿ ಮಂಗಳ ದಾಯಿನಿ
ಮಂಗಳ ಆರತಿ ಎತ್ತುವೆನಮ್ಮ
ಮಲ್ಲಿಗೆ ಹೂಗಳ ಮಾಲೆಯ ಮುಡಿಸಿ
ಮುದದಿ ಮಂಗಳ ಪಾಡುವೆನಮ್ಮ ॥೧೦॥
ಮುತ್ತಿನ ಆರತಿ ಕೆಂಪಿನ ಆರತಿ
ಹವಳದ ಆರತಿ ಎತ್ತುವೆನಮ್ಮ
ಲಕ್ಷದ ಆರತಿ ರತ್ನದ ಆರತಿ
ತುಪ್ಪದ ಆರತಿ ಬೆಳಗುವೆನಮ್ಮ ||೧೧||
0 ಕಾಮೆಂಟ್‌ಗಳು