|| ಕೃಷ್ಣನಿಗೆ ಮಂಗಳ ||
ರಚನೆ : ಪುರಂದರ ದಾಸರು
ಮನ್ನಾರು ಕೃಷ್ಣಗೆ ಮಂಗಳ ಜಗವ
ಮನ್ನಿಸಿದೊಡೆಯಗೆ ಮಂಗಳ ||ಪ||
ಬೊಮ್ಮನ ಪಡೆದಗೆ ಭಕ್ತರುದ್ದಾರಿಗೆ
ಕಮ್ಮಗೋಲನಯ್ಯಗೆ ಮಂಗಳ
ಧರ್ಮರಕ್ಷಕನಿಗೆ ದಾನವಶಿಕ್ಷಗೆ
ನಮ್ಮ ರಕ್ಷಕನಿಗೆ ಮಂಗಳ ||1||
ತುರುಗಳ ಕಾಯ್ದಗೆ ಕರುಣಾಕರನಿಗೆ
ಗಿರಿಯನೆತ್ತಿದವಗೆ ಮಂಗಳ
ವರದ ತಿಮ್ಮಪ್ಪಗೆ ವಾರಿಜನಾಭಗೆ
ಹರಿ ಸರ್ವೋತ್ತಮನಿಗೆ ಮಂಗಳ||2||
ದೇವಕಿದೇವಿಯ ತನಯಗೆ ಮಂಗಳ
ದೇವ ತಿಮ್ಮಪ್ಪಗೆ ಮಂಗಳ
ಮಾವನ ಕೊಂದು ಮಲ್ಲರ ಮಡುಹಿದ
ಪುರಂದರವಿಠಲಗೆ ಮಂಗಳ||3||
[ಮನ್ನಾರು - ಮನೋಹರ, ಸುಂದರ]
0 ಕಾಮೆಂಟ್‌ಗಳು