ಬಂಟನಾಗಿ ಬಾಗಿಲ ಕಾಯುವೆ ಶ್ರೀಹರಿಯ - Bantanagi Bagila Kayuve Sri Hariya

|| ಹರಿ ಭಜನೆ ||

ರಚನೆ : ಕನಕದಾಸರು




ಬಂಟನಾಗಿ ಬಾಗಿಲ ಕಾಯುವೆ, ಶ್ರೀಹರಿಯ || ಪ ||

ವೈಕುಂಠದ ಸೋಂಪಿನ ದಾಸರ ಮನೆಯ ||ಅ.ಪ||



ಹೊರಸುತ್ತು ಪ್ರಾಕಾರ ಸುತ್ತಿ ನಾ ಬರುವೆ

ಬರುವ ಹೋಗುವರ ವಿಚಾರಿಸಿ ಬಿಡುವೆ

ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ

ಶ್ರೀಹರಿಯ ಸಮುದ ಓಲಗದೊಳಿರುವೆ || ೧ ||


ತೊತ್ತು ತೊಂಡನಾಗಿ ಬಾಗಿಲ ಕಾಯ್ವೆ 

ಚಿತ್ರದ ಚಾವಡಿ ರಜವನು ಬಳಿವೆ

ಮುತ್ತಿನ ರಂಗವಲ್ಲಿಯನಿಟ್ಟು ಬರೆವೆ 

ರತ್ನಗಂಬಳಿ ಹೊತ್ತು ಹಾಸುವೆನು II೨||


ವೇಳವೇಳೆಗೆ ನಾನೂಳಿಗವ ಮಾಡುವೆ

ಆಲವಟ್ಟಿಗೆ ಚಾಮರವ ಬೀಸುವೆ 

ತಾಳದಂಡಿಗೆ ಭೃಂಗಿ  ಮೇಳಗಳ ಕೂಡಿ

ಶ್ರೀಲೋಲನ ಕೊಂಡಾಡಿ ಪಾಡುವೆನು || ೩ ||


ಎಂಜಲ ಹರಿವಾಣಂಗಳ ಬೆಳಗುವೆ 

ಕಂಜನಾಭನ ಪಾದಕಮಲವ ತೊಳೆವೆ 

ರಂಜಿಪ ಕುಸುಮದ ಮಾಲೆ ತಂದಿಡುವೆ

ಸಂಜೆಗೆ ಪಂಜಿನ ದಾಸನಾಗಿರುವೆ ||೪||


ಮೀಸಲೂಳಿಗವ ನಾ ಮಾಡಿಕೊಂಡಿರುವೆ 

ಶೇಷ ಪ್ರಸಾದವ ಉಂಡುಕೊಂಡಿರುವೆ 

ಶೇಷಗಿರಿ ಕಾಗಿನೆಲೆಯಾದಿಕೇಶವನ 

ದಾಸರ ದಾಸರ ದಾಸರ ಮನೆಯ ||೫||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು