|| ಗಣಪತಿ ಸ್ತುತಿ ||
ದ್ವಿರದ ವದನ ಪಾರ್ವತಿ ತನಯ | ನಿನ್ನಯ |
ಚರಣಾರವಿಂದದ್ವಯವ ತೋರೋ ದೇವಾ ॥ಪ॥
ಈಶ್ವರ ಸುತನೆ ಮೋದಕ ಪ್ರಿಯನೆ |
ಪಾಶಾಂಕುಶ ಧರನೆ | ನನ್ನಯ ಭವ
ಪಾಶ ಬಿಡಿಸಿ ಶ್ರೀಶನ ತೋರೊ |
ಆಕಾಶದ ಅಭಿಮಾನಿ ನಿನಗೆ ನಮಿಸುವೆನೊ ||1||
ಸಿಂಧೂರ ವದನನೆ ಮಂಗಳ ಕಾಯನೆ |
ಮಂದಾರ ಪುಷ್ಪ ಪ್ರಿಯನೆ| ನನ್ನಯ ಹೃದಯ|
ಮಂದಿರದಲಿ ಬಂದು ಆನಂದವೀಯೊ |
ಇಂದಿರಾರಮಣನ ಚಂದದಿ ತೋರೊ ||2||
ತೋರೋ ನಿನ್ನಯ ಚಾರು ಚರಣ ಗಣನಾಥನೆ |
ತರಳ ನಾನು ನಿನ್ನಯ ನೆರಳಲ್ಲಿ ಇರಿಸೊ |
ಹರಿಯೊಲುಮೆ ರುಕ್ಮಿ ಣಿಕೃಷ್ಣ ನಂದನನಿಗೆ |
ದೊರಕುವಂತೆ ಕರುಣಿಸು ವಕ್ರತುಂಡನೆ ||3||
0 ಕಾಮೆಂಟ್‌ಗಳು