|| ರಂಗ ಸ್ತುತಿ ||
ನೀನೇ ಬಲ್ಲಿದನೋ ರಂಗ
ನಿನ್ನ ದಾಸರೇ ಬಲ್ಲಿದರೋ ||ಪ||
ನಾನಾ ತೆರದಿ ನಿಧಾನಿಸಿ ನೋಡಲು
ನೀನೇ ಭಕ್ತರಾಧೀನನಾದ ಮೇಲೆ ||ಅ.ಪ||
ಪರಮಪುರುಷ ಪರಬೊಮ್ಮನೆಂದೆನುತಲಿ
ನಿರುತದಿ ಶ್ರುತಿಯು ಕೊಂಡಾಡಲು ನಿನ್ನನು
ನರ ಧರ್ಮಜನರಮನೆಯ ಒಳಗೆ ನಿಂ-
ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ ||೧||
ಖ್ಯಾತಿಯಿಂದ ಪುರುಹೂತ ಸಹಿತ ಸುರ
ವ್ರಾತವು ನಿನ್ನನು ವಾಲೈಸುತಿರೆ
ಭೂತಳದೊಳು ಸಂಪ್ರೀತಿಯಿಂದ
ಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ ||೨||
ಜಲಜಭವಾಂಡದೊಡೆಯನೆಂದೆನಿಸುವ
ಬಲು ಬಲು ದೊಡ್ಡವನಹುದಹುದಾದಡೆ
ಒಲಿದು ಸದ್ಗತಿಯೀವೆ ಅನುದಿನದಲಿ ನೀ
ಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ ||೩||
ಧುರದೊಳು ವಡೆಯನೆಚ್ಚೊಡೆದ ಭೀಷ್ಮನ
ಮರಳಿಪುದೆನುತಲಿ ಚಕ್ರವ ಪಿಡಿಯಲು
ಹರಿ ನಿನ್ನ ಕರುಣದ ಜೋಡು ತೊಟ್ಟಿರಲವ-
ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ ||೪||
ತರಳನ ಕರೆಯಲು ಒಡೆದು ಕಂಬದಿ ಬಂದು
ನರಮೃಗವೇಷದಿ ಭಕುತರ ತೆತ್ತಿಗನಾದೆ
ಕರುಣದಿ ಸಲಹೋ ಶ್ರೀರಂಗವಿಠಲ ನಿನ್ನ
ಸ್ಮರಿಪರ ಮನದಲಿ ಸೆರೆ ಸಿಕ್ಕ ಮ್ಯಾಲೆ ||೫||
0 ಕಾಮೆಂಟ್‌ಗಳು