ಅಮ್ಮ ನಿಮ್ಮ ಮನೆಗಳಲ್ಲಿ - Amma Nimma Manegalalli


|| ಶ್ರೀ ಕೃಷ್ಣ ಭಜನೆ ||





ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಾಣಿರೇನೆ||


ಕಾಶಿ ಪೀತಾಂಬರ ಕೈಯಲಿ ಕೊಳಲು

ಪೂಸಿದ ಶ್ರೀಗಂಧ ಮೈಯೊಳಗಮ್ಮ|

ಲೇಸಾಗಿ ತುಲಸಿಯ ಮಾಲೆಯ ಧರಿಸಿದ

ವಾಸುದೇವನು ಬಂದ ಕಾಣಿರೇನೆ||


ಕರದಲಿ ಕಂಕಣ ಬೆರಳಲ್ಲಿ ಉಂಗುರ

ಕೊರಳಲ್ಲಿ ಧರಿಸಿದ ಹುಲಿಯುಗುರಮ್ಮ|

ಅರಳೆಲೆ ಕನಕಕುಂಡಲ ಕಾಲಲಂದುಗೆ

ಉರಗಶಯನ ಬಂದ ಕಾಣಿರೇನೆ||


ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ

ನೀಲವರ್ಣನು ನಾಟ್ಯವಾಡುತಲಿ|

ಮೇಲಾಗಿ ಬಾಯಲಿ ಜಗವನು ತೋರಿದ

ಮೂಲೋಕದೊಡೆಯನ ಕಾಣಿರೇನೆ||


ಕುಂಕುಮ ಕಸ್ತೂರಿ ಕುಡಿಕುಡಿ ನಾಮವು

ಶಂಖಚಕ್ರಗಳ ಧರಿಸಿಹನಮ್ಮ|

ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ

ಪಂಕಜಾಕ್ಷ ಬಂದ ಕಾಣಿರೇನೆ||


ನೊಸಲ ಸುತ್ತಿದ ಪಟ್ಟಿ ನಡುವಿನ ವಡ್ಯಾಣ

ಎಸೆವ ಕತ್ತೂರಿ ಬಟ್ಟು ಮೈಯವನಮ್ಮ|

ಪಸರಿಸಿ ಪಟ್ಟೆಯ ಹಾವಿಗೆ ಮೆಟ್ಟಿದ

ಅಸುರಾಂತಕ ಬಂದ ಕಾಣಿರೇನೆ||


ತೆತ್ತೀಸಕೋಟಿ ದೇವತೆಗಳನೊಡಗೂಡಿ

ಹತ್ತವತಾರವನೆತ್ತಿದನೆ|

ಭಕ್ತವತ್ಸಲ ನಮ್ಮ ಪುರಂದರವಿಟ್ಠಲ

ನಿತ್ಯೋತ್ಸವ ಬಂದ ಕಾಣಿರೇನೆ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು