ಬಾರಮ್ಮ ಮನೆಗೆ ಸೌಭಾಗ್ಯದ ಮಹಾಲಕ್ಷ್ಮಿ - Baramma Manage Saubhagyada Mahalakshmi

 ||ಲಕ್ಷ್ಮಿ ಹಾಡು ||





ಬಾರಮ್ಮ ಮನೆಗೆ ಸೌಭಾಗ್ಯದ ಮಹಾಲಕ್ಷ್ಮಿ ||

ಬಾರಮ್ಮ ಮನೆಗೆ ವರಮಹಾಲಕ್ಷ್ಮಿ||

ಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರು

ಮಾರನಯ್ಯನ ಕೂಡಿ ಮನೆಗೆ ಹರುಷದಿ ಬೇಗ ||


ಶಂಖ ಚಕ್ರ ಗದಾ ಪದ್ಮವು ಧರಿಸಿದ

ಪಂಕಜಾಕ್ಷನ ಸಿರಿಪಟ್ಟದರಸಿ ದೇವಿ

ಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆ

ಬಿಂಕಮಾಡದಲೆ ಬಾ ವೆಂಕಟನರಸಿಯೆ||೧||


ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರ

ಇಷ್ಟಾರ್ಥಗಳ ಕೊಟ್ಟುದ್ಧರಿಪ ಭಾರ್ಗವಿ 

ಭಕ್ತವತ್ಸಲನೊಡಗೂಡುತ ಬಾರಮ್ಮ

ಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ||೨|| 


ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿ

ರನ್ನ ಪವಳ ಹಾರಾಲಂಕೃತ ಶೋಭಿತೆ

ಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿ ಕನ್ನೇರು

ಕರೆವರು ಕಮಲಾಕ್ಷನೊಡಗೂಡಿ||೩||


ನಿಗಮವೇದ್ಯಳೆ ನಿನ್ನಅಗಣಿತ ಗುಣಗಳ

ಪೊಗಳುವ ಸುಜನರ ಅಘ ಪರಿಹರಿಸುತ್ತ 

ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ

ಖಗವಾಹನನ ರಾಣಿ ಲಗುಬಗೆಯಿಂದಲಿ||೪|| 


ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತ

ಬಡನಡು ಬಳುಕುತ್ತ ಕೊಡುತ ವರಗಳನು

ಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರು

ಕಡಲೊಡೆಯನ ರಾಣಿ ಸಡಗರದಿಂದೊಮ್ಮೆ||೫|| 


ಕ್ಷೀರವಾರಿಧಿಯ ಕುಮಾರಿಯೆ ಬಾರೆಂದು

ಸಾರಸಮುಖಿಯರು ಸರಸದಿ ಕರೆವರು

ಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆ

ಚಾರುಮಂಗಳೆ ಸತ್ಯಶ್ರೀಭೂದುರ್ಗಾಂಬ್ರಣಿ||೬|| 


ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದು

ನಮಿಸಿ ಬೇಡುವೆ ನಿನ್ನ ಭ್ರಮರಕುಂತಳೆ ತಾಯೆ

ಕಮಲನಾಭ ವಿಠ್ಠಲನ ಕೂಡಿ

ಹರುಷದಿಸುಮನಸರೊಡೆನೆ

ಸತಿಸಾರ್ವಭೌಮಳೆ||೭||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು