ಕಂದನೆಂದೆನಿಸಿದ ಕೌಸಲ್ಯ ದೇವಿಗೆ -

|| ಸಂಕ್ಷೇಪ ರಾಮಾಯಣ ||

ರಾಗ : ಸರಸಾಂಗಿ
ರಚನೆ : ಹರಪನಹಳ್ಳಿ ಭೀಮವ್ವ





ಕಂದನೆಂದೆನಿಸಿದ ಕೌಸಲ್ಯ ದೇವಿಗೆ

ರಾಮ ಎನಬಾರದೆ

ಇಂದಿರಾಪತಿ ರಾಮಚಂದ್ರಗೆ

ಶ್ರೀರಘುರಾಮ ಎನಬಾರದೆ ॥1॥


ಶಿಶುವಾಗಿ ಅವತಾರ ಮಾಡಿದ

ದಶರಥನಲ್ಲಿ ರಾಮ ಎನಬಾರದೆ

ಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀ

ರಾಮ ಎನಬಾರದೆ ॥ 2 ॥ 


ನೀಟಾಗಿ ನೆನೆ ಭಾನುಕೋಟಿತೇಜ

ಶ್ರೀರಾಮ ಎನಬಾರದೆ 

ಸಾತ್ವಿಕ ದೈವವೆ ತಾಟಕಾಂತಕ

ಶ್ರೀರಾಮ ಎನಬಾರದೆ ॥ 3 ॥


ಪಾದನಖವು ಸೋಕಿ ಪಾದನಾಶನವಾಗೆ

ರಾಮ ಎನಬಾರದೆ

ಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು

ರಾಮ ಎನಬಾರದೆ ॥ 4 ॥


ಸಕಲ ಸದ್ಗುಣ ಪೋಗಿ ಮಿಥಿಲಾ ಪಟ್ಟಣದಲಿ

ರಾಮ ಎನಬಾರದೆ

ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ

ರಾಮ ಎನಬಾರದೆ ॥5॥


ಚೆಲ್ವೆ ಜಾನಕಿ ಮಲ್ಲಿಗೆಯ ವನಮಾಲೆಯು

ರಾಮ ಎನಬಾರದೆ

ವಲ್ಲಭಗ್ಹಾಕಲು ಫುಲ್ಲಲೋಚನೆ

ಸೀತಾರಾಮ ಎನಬಾರದೆ ॥6॥


ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ

ರಾಮ ಎನಬಾರದೆ

ಮಾಂಗಲ್ಯ ಬಂಧನ ಮಾಡಿದ ಮಹಾತ್ಮನು

ರಾಮ ಎನಬಾರದೆ ॥ 7 ॥


ಜಗದೇಕ ಸುಂದರಿ ಜಾನಕಿಯನೆ ಗೆದ್ದ

ರಾಮ ಎನಬಾರದೆ

ಜಗದೀಶ ಜನಕಗೆ ಜಾಮಾತನೆನಿಸಿದೆ

ರಾಮ ಎನಬಾರದೆ ॥ 8 ॥


ಮುದ್ದು ಜಾನಕಿ ಕೂಡಿ ಅಯೋಧ್ಯಕೆ ಬರುತಿರೆ

ರಾಮ ಎನಬಾರದೆ

ಮಧ್ಯ ಮಾರ್ಗದಿ ಬಂದಿದ್ದನು ಭಾರ್ಗವ

ರಾಮ ಎನಬಾರದೆ ॥ 9 ॥


ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದಿ

ರಾಮ ಎನಬಾರದೆ

ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ

ರಾಮ ಎನಬಾರದೆ॥10॥


ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ

ರಾಮ ಎನಬಾರದೆ

ದುಷ್ಟ ಕೈಕೆಯ ನಿಷ್ಠೂರ್ವಚನವ ಕೇಳಿದ

ರಾಮ ಎನಬಾರದೆ ॥ 11 ॥


ಆ ಲಕ್ಷುಮಿಯ ಮಾತಲಕ್ಷ್ಯವ ಮಾಡದೆ

ರಾಮ ಎನಬಾರದೆ

ಲಕ್ಷ್ಮಣ ಲಕ್ಷ್ಮಿ ಕೂಡ್ವನವಾಸ ತಿರುಗಿದ

ರಾಮ ಎನಬಾರದೆ ॥12॥


ಸೋಸಿಲಿಂದಲಿ ಸತಿ ಆದೇನೆಂದಸುರೆಯ

ರಾಮ ಎನಬಾರದೆ

ನಾಶರಹಿತ ಕಿವಿ ನಾಸಿಕನಳಿಸಿದ

ಶ್ರೀ ರಾಮ ಎನಬಾರದೆ ॥13॥


ದಂಡಕಾರಣ್ಯದಿ ಕಂಡು ಮಾರೀಚನ್ನ

ರಾಮ ಎನಬಾರದೆ

ಹಿಂದ್ಹೋಗೆ ರಾಘವ ಬಂದ ರಾವಣನಲ್ಲೆ

ರಾಮ ಎನಬಾರದೆ ॥ 14 ॥


ಘಾತಕ ರಾವಣ ಜಗನ್ಮಾತೆನೊಯ್ಯಲು

ರಾಮ ಎನಬಾರದೆ

ಸೋತು ಜಟಾಯು ಯುದ್ಧವ ಮಾಡಿ ತಾ ಬೀಳಲು

ರಾಮ ಎನಬಾರದೆ॥15॥


ಒಲಿದು ಸುಗ್ರೀವಗೆ ವಾಲಿ ವಧೆಯ ಮಾಡಿ

ರಾಮ ಎನಬಾರದೆ

ವಾನರಗಳ ಕೂಡಿ ವಾರಿಧಿ ಕಟ್ಟಿದ

ಶ್ರೀರಾಮ ಎನಬಾರದೆ॥16॥


ಲೋಕ ಮಾತೆಯ ಲಂಕಾನಾಥ ತಾ ಒಯ್ದಾಗ

ರಾಮ ಎನಬಾರದೆ

ಸೀತಾಕೃತಿಯನಿಟ್ಟ ಅಶೋಕ ವನದೊಳು

ರಾಮ ಎನಬಾರದೆ ॥ 17 ॥


ಮಂಡೋದರಿಯ ಗಂಡನ್ನ ದಶಶಿರಗಳ

ರಾಮ ಎನಬಾರದೆ

ಚೆಂಡನಾಡಿದ ಕೋದಂಡಪಾಣಿಯ

ಶ್ರೀರಾಮ ಎನಬಾರದೆ॥18॥


ಪ್ರೀತಿಂದ್ವಿಭೀಷಣಗೆ ಪಟ್ಟವಗಟ್ಟಿದ

ರಾಮ ಎನಬಾರದೆ

ಸೀತಾ ಸಮೇತನಾಗಿ ಸಿಂಧು ದಾಟಿದ

ರಾಮ ಎನಬಾರದೆ॥19॥


ಆದಿ ಲಕ್ಷುಮಿ ಕೂಡಿ ಹೋದನಯೋಧ್ಯಕೆ

ರಾಮ ಎನಬಾರದೆ

ಶ್ರೀದೇವಿ ಸಹಿತ ಪಟ್ಟಣ ಹೊಕ್ಕ

ಪಟ್ಟಾಭಿರಾಮ ಎನಬಾರದೆ ॥20॥


ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ

ರಾಮ ಎನಬಾರದೆ

ಮುಕ್ತಿದಾಯಕ ಮುಂದೆ ಬಿಡದೆ ಕಾಪಾಡುವ

ರಾಮ ಎನಬಾರದೆ ॥21॥


ಪತ್ನಿ ವಾರ್ತೆಯ ತಂದ ಪವನಸುತಗೆ ಒಲಿದ

ರಾಮ ಎನಬಾರದೆ

ಸತ್ಯಲೋಕದ ಆಧಿಪತ್ಯವ ಕೊಟ್ಟ

ಶ್ರೀ ರಾಮ ಎನಬಾರದೆ ॥22॥


ರಾಮ ರಾಮನು ಎಂದು ಕರೆಯೆ ಭಕ್ತಿಯ ನೋಡಿ

ರಾಮ ಎನಬಾರದೆ

ಪ್ರೇಮದಿ ತನ್ನ ನಿಜಧಾಮವ ಕೊಡುವೋನು

ರಾಮ ಎನಬಾರದೆ ॥23॥


ಅರಸಾಗಯೋಧ್ಯವನಾಳಿ ಯದುಕುಲದಲಿ

ರಾಮ ಎನಬಾರದೆ

ಹರುಷದಿ ಭೀಮೇಶ ಕೃಷ್ಣ ನಾಗ್ಯುದಿಸಿದ

ರಾಮ ಎನಬಾರದೆ ॥24॥



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು