ಪಾಲಿಸೆ ಪದುಮಾಲಯೆ ನೀನೇ ಗತಿ - Palise Padumalaye Neene Gathi

||ಲಕ್ಷ್ಮಿ ಹಾಡು||

ರಾಗ : ಮಧ್ಯಮಾವತಿ

ತಾಳ : ಅಟ್ಟ



ಪಾಲಿಸೆ ಪದುಮಾಲಯೆ ನೀನೇ ಗತಿ ||ಪ||

ಬಾಲಕನು ತಾನಾಗಿ ಗೋಪಿಗೆ

ಲೀಲೆಯಿಂದಲಿ ನಂದಗೋಕುಲ-

ಬಾಲೆಯರ ಮೋಹಿಸುತ ಅಸುರರ

ಕಾಲನೆನಿಸಿದ ಬಾಲಕನ ಪ್ರಿಯೆ ||ಅ.ಪ||


ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ

ವನ್ನು ನಂಬಿದೆ ನೀ ಬಲ್ಲೆ ತಡಮಾಡದೆ

ಚಿಣ್ಣ ಕರೆಯಲು ಘನ್ನಮಹಿಮನು

ಉನ್ನತದ ರೂಪಿನಲಿ ಗುಣಸಂ

ಪನ್ನ ರಕ್ಕಸರನ್ನು ಸೀಳಿದ

ಪನ್ನಗಾದ್ರಿನಿವಾಸೆ ಹರಿಪ್ರಿಯೆ ||೧||


ಅರಿಯದ ತರಳನೆಂದು ಶ್ರೀಪತಿ ಸತಿ

ಕರುಣದಿ ಸಲಹೆ ಬಂದು ಕರುಣಾಸಿಂಧು

ಸರಸಿಜಾಸನ ರುದ್ರರೀರ್ವರ

ವರದಿ ಮೂರ್ಖನ್ರಸುರ ಬಾಧಿಸ

ಹರಿವರರ ದಂಡೆತ್ತಿ ಬಹುಮುಖ

ದುರುಳನ ಶಿರ ತರಿದವನ ಪ್ರಿಯೆ ||೨||


ಅಜಮನಸಿಜಜನನಿ ಅಂಬುಜಪಾಣಿ

ಭುಜಗಸನ್ನಿಭವೇಣಿ ನಿತ್ಯಕಲ್ಯಾಣಿ

ಕುಜನಮರ್ದನ ವಿಜಯವಿಠಲನ

ಭಜಿಸಿಪಾಡುವ ಭಕ್ತಕೂಟವ

ನಿಜದಿ ಸಲಹುವೆನೆಂಬ ಬಿರುದುಳ್ಳ

ವಿಜಯಸಾರಧಿ ವಿಶ್ವಂಭರಪ್ರಿಯೆ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು