ವರ ವೈಕುಂಠದಿಂ ಬಂದವಗೆ - Vara Vaikuntadi Bandavage

||ವೆಂಕಟೇಶ್ವರ ಮಂಗಳ ಸ್ತುತಿ||




ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ||


ವರ ವೈಕುಂಠದಿಂ ಬಂದವಗೆ |

ವರಗಿರಿಯಲಿ ಸಂಚರಿಸುವಗೆ ||

ವರಹದೇವನ ಅನುಸರಿಸಿ ಸ್ವಾಮಿ ಪು-

ಷ್ಕರಣಿ ತೀರದಲ್ಲಿರುವವಗೆ ||೧||


ಸರಸದಿ ಬೇಟೆಗೆ ಹೊರಟವಗೆ |

ಸರಸಿಜಾಕ್ಷಿಯಳ ಕಂಡವಗೆ ||

ಮರುಳಾಟದಿ ತಾ ಪರವಶನಾಗುತ |

ಕೊರವಿ ವೇಷ ಧರಿಸಿರುವವಗೆ ||೨||


ಗಗನ ರಾಜ ಪುರಕ್ಕೋದವಗೆ |

ಬಗೆ ಬಗೆ ನುಡಿಗಳ ನುಡಿದವಗೆ ||

ಅಗವಾಸಗೆ ತನ್ನ ಮಗಳನು ಕೊಡು ಎಂದು |

ಗಗನ ರಾಜ ಸತಿಗೇಳವಗೆ ||೩||


ತನ್ನ ಕಾರ್ಯ ತಾ ಮಾಡವಗೆ |

ಇನ್ನೊಬ್ಬರ ಹೆಸರ್ ಹೇಳದವಗೆ ||

ಮುನ್ನ ಮದುವೆ ನಿಶ್ಚಯವಾಗಿರಲು |

ತನ್ನ ಬಳಗ ಕರೆಸಿರುವವಗೆ ||೪||


ಎತ್ತಿ ನಿಬ್ಬಣ ಹೊರಟವಗೆ |

ನಿತ್ಯ ತೃಪ್ತನಾಗಿರುವವಗೆ ||

ಉತ್ತರಾಣೆಯ ವಾಗರನುಂಡು |

ತೃಪ್ತನಾಗಿ ತೇಗಿರುವವಗೆ ||೫||


ಒದಗಿ ಮುಹೂರ್ತಕೆ ಬಂದವಗೆ |

ಸದಯ ಹೃದಯನಾಗಿರುವವಗೆ ||

ಮುದದಿಂದಲಿ ಮುದ್ದು ಪದುಮಾವತಿಯಳ |

ಮದುವೆ ಮಾಡಿಕೊಂಡ ಮದುಮಗಗೆ ||೬||


ಕಾಂತೆಯಿಂದ ಸಹಿತಾದವಗೆ |

ಸಂತೋಷದಿ ಕುಳಿತಿರುವವಗೆ ||

ಸಂತತ ಶ್ರೀಮದನಂತಾದ್ರೀಶಗೆ |

ಶಾಂತ ಮೂರುತಿ ಸರ್ವೋತ್ತಮಗೆ ||೭||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು