ಗುರು ತವ ಚರಣಗಳಾ ಧ್ಯಾನಿಸುತಲೀ - Guru Tava Charanagala Dhyanisutali

|| ಗುರು ಸ್ತುತಿ ||




ಗುರು ತವ ಚರಣಗಳಾ ಧ್ಯಾನಿಸುತಲೀ 

ಪಾಡುವೆ ಮಹಿಮೆಗಳಾ ||ಪ||


ಅತ್ರಿ ಮುನಿಯ ಸತಿ ಅನುಸೂಯೆಗೆ 

ಪುತ್ರರಾಗಿಯೇ ಮನವನು ತಣಿಸಿ 

ದತ್ತ ಚಂದ್ರ ದೂರ್ವಾಸ ನಾಮದಲ್ಲಿ 

ಪೃಥ್ವಿಯೋಳ್‌ ಮೆರೆದಿಹ ದತ್ತಾತ್ರೇಯರೇ//೧// 


ಬಡ ಬ್ರಾಹ್ಮಣನಿಗೆ ನಿಧಿಯನು ಇತ್ತು 

ಬರಡೆಮ್ಮೆಗೆ ಅತಿ ಹೈನವನಿತ್ತು 

ಜಡ ಮತಿ ಅವನೊಳು ವೇದವ ಅನ್ನಿಸಿ 

ಕಡುಮತಿ ವಿಪ್ರರ ಮದವನು ತರಿದಾ//೨// 


ರಜಕಗೆ ರಾಜ್ಯದ ಭೋಗವನಿತ್ತು 

ಭಜಕಗೆ ಅನುದಿನ ದರುಶನವಿತ್ತು 

ಬಂಜೆಗೆ ಪುತ್ರನ ವರವನ್ನಿತ್ತು 

ಸಾದ್ವಿಗೆ ಸತಿ ಸೌಭಾಗ್ಯವನಿತ್ತಾ ||೩||


ಭಿಕ್ಷೆಯ ಗೈಯ್ಯಲು ಬಂದ ಬ್ರಾಹ್ಮಣನೊಳು 

ಅಕ್ಷಯದಡಿಗೆಯ ಮಾಡಿಸಿ ಕರುಣದಿ 

ವೀಕ್ಷಿಸಿ ಅತ್ತಿಯ ಕಟ್ಟಿಗೆ ಚಿಗುರಿಸಿ 

ತಕ್ಷಣ ಭಕ್ತನ ಕುಷ್ಟವ ಕಳೆದಾ ||೪||


ಮಂದಮತಿಗೆ ಸುಜ್ಞಾನವನಿತ್ತು 

ನಂದಿಗೆ ಸೇವೆಯ ಭಾಗ್ಯವನಿತ್ತು 

ವಂದಿಸಿ ಬೇಡುವ ಭಜಕ ವೃಂದವನು 

ಚಂದದಿ ಪೊರೆವ ನೃಸಿಂಹ ಯತಿವರಾ ||೫||


ತರತರ ಕಷ್ಟದಿ ಬಳಲುವ ತರಳರ 

ಪರಿಪರಿ ವಿಧದಲಿ ಪೊರೆಯುತಲಿರುವ 

ನರರೂಪದೊಳು ಭಕುತರ ಸಲಹಿದ 

ಹರಿಹರ ಬ್ರಹ್ಮ ಸ್ವರೂಪ ಶ್ರೀಧರಾ ||೬||


ವಿಭೂತಿ ಲೇಪನ ಪಾಪವಿನಾಶನ 

ರುದ್ರಾಕ್ಷಿ ಧಾರಣ ಮೋಕ್ಷಕೆ ಕಾರಣ 

ಗುರು ಸ್ಮರಣೆಯನು ಗೈಯ್ಯಲು ಅನುದಿನ 

ಮರಣದ ಭಯವನು ಕಳೆವನು ಗುರುವು ||೭||


ಜಗದೋದ್ದಾರಕ ಸದ್ಗುರು ನಿಮ್ಮಯ 

ಅಗಮ್ಯ ಮಹಿಮೆಯ ಪೊಗಳಲರಿಯೆನು 

ಯೋಗಿವರ್ಯ ಶ್ರೀಪಾದ ವಲ್ಲಭಾ 

ಬೇಗದಿ ದರುಶನ ಇತ್ತು ರಕ್ಷಿಸೋ ||೮||


ಭವಸಾಗರದಲಿ ಮುಳುಗೇಳುತಲಿ 

ತವ ಮಹಿಮೆಯನು ಅರಿಯದಾದೆನು 

ಭವ ಬಂಧನವನು ಬಿಡಿಸುತಲೆನ್ನನು 

ಅವನಿಯೊಳುದ್ದರಿಸಿರಿ ಗುರುವರ್ಯರೇ ||೯||


ಭಕ್ತಿಯಿಂದಲಿ ಭಜಿಸಲು ಅರಿಯೇ 

ಶಕ್ತಳಾಗಿ ಪಾದ ಪೂಜಿಸಲರಿಯೆ 

ಉಕ್ತಿಯಿಂದ ನಾಮ ಸ್ಮರಿಸಲು ಅರಿಯೇ 

ಮುಕ್ತಿ ಮಾರ್ಗವನ್ನು ತೋರಿಸಿ ಗುರುವೇ ||೧೦||









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು