|| ಬಿಂದುಮಾಧವ ಸ್ತುತಿ ||
ಧರೆಗೆ ಇಳಿದು ಬಂದ ಮಾರುತಿ ನರನ ರೂಪಿನಿಂದ
ಶ್ರೀರಾಮ ಭಕ್ತರ ಪೊರೆಯುವೆನೆಂದ
ಜಗದಲಿ ದುರಿತವ ಕಳೆಯುವೆನೆಂದ ||ಪ||
ಜಠಾಧಾರಿ ಇವನು ಕೊರಳಲಿ ರುದ್ರಾಕ್ಷಿ ಧರಿಸಿಹನು
ಹಣೆಗೆ ಮೈಯಿಗೆ ತಾ ಬೂದಿ ಬಳಿವನು
ಕುಂಕುಮ ಧರಿಸಿದ ವಜ್ರ ಶರೀರನು ||೧||
ಕೆಂಪು ವಸ್ತ್ರಧಾರಿ ಇವನು ಹಠದ ಬ್ರಹ್ಮಚಾರಿ
ಅದ್ವೈತವನು ತಿಳಿಸುವ ಸಾರಿ
ಭಕ್ತಗೆ ತೋರುವ ಮುಕ್ತಿಯ ದಾರಿ ||೨||
ಗುರುವನು ಸ್ಮರಿಸಿದರೆ ಮನವು ನಿಶ್ಚಲವಾಗುವುದು
ಇಂದ್ರಿಯ ಸುಖವು ಕ್ಷಣಿಕವೆನ್ನುವ
ಭಾವನೆ ಮನದಲಿ ಉದ್ಭವಿಸುವುದು ||೩||
ದೇಹ ಭಾವನೆಯಿಲ್ಲ ಈತಗೆ ಸುಖ ದುಃಖಗಳಿಲ್ಲ
ಅಣುವನು ಗಿರಿಯ ಮಾಡಲು ಬಲ್ಲ
ಗಿರಿಯನು ಅಣುವನು ಆಗಿಸ ಬಲ್ಲ ||೪||
ರಾಗ ದ್ವೇಷವಳಿಸಿ ಮನವನು ಬ್ರಹ್ಮ ಭಾವದಿರಿಸಿ
ಆತ್ಮ ರಾಮನ ಹೃದಯದೊಳಿರಿಸಿ
ಸಚ್ಚಿದಾನಂದದಿ ತಾ ನಲಿದಿರುವ ||೫||
ಸಿದ್ಧಿಗೆ ಬೆಲೆಯಿಲ್ಲ ಇವನಲಿ ನಾಟಕ ನಡೆಯೋಲ್ಲ
ಭಕ್ತಿಗೆ ಇವನು ಒಲಿಯುವನಲ್ಲ
ಮನ ದುಗುಡವನು ಕಳೆಯುವನಲ್ಲ ||೬||
ವೇಷಕ್ಕೆ ಜಗದಲಿ ಬೆಲೆಯು ಭಜನೆಗೆ ಬೆಲೆಯಿಲ್ಲ
ಗುರು ತಾ ನೆಲೆಸಿರೆ ಅಂತಾರಾಳದಲಿ
ಕಾಡು ಚಿಂತೆಗೆ ಉಳಿಗಾಲವೆಲ್ಲಿ ||೭||
ಭೂತ ಪ್ರೇತಗಳೆಲ್ಲ ಹನುಮಗೆ ಹೆದರಿ ತಾ ಓಡುವುವು
ಸದ್ಗುರು ಕರುಣೆಯು ಇಲ್ಲದೆ ಹೋದರೆ
ಕಾರ್ಯಗಳಾವುವು ಸಿದ್ಧಿಸಲಾರವು ||೮||
ಸಿರಿವಂತನೆ ಇರಲಿ ಭಕ್ತನು ದರಿದ್ರನಾಗಿರಲಿ
ಶುದ್ಧ ಭಾವನೆಗೆ ಆದ್ಯತೆಯಿಲ್ಲ
ಭವ ಬಂಧನವು ಉಳಿಯುವುದಿಲ್ಲ ||೯||
ಜಗದೊಡೆಯನು ಇವನು ಭಕ್ತಗೆ ಮುಕ್ತಿಯ ನೀಡುವನು
ಹನುಮನ ಕಿಂಕರ ತಾಂನೆಂದೆನುವನು
ಬೆಲಗೂರಿನಲಿ ಇವ ನೆಲೆಸಿಹನು ||೧೦||
ಭಕ್ತನ ಮನವರಿವ ಕರ್ಮದ ವಿವರವ ಇವ ಕೊಡುವ
ನುಡಿದಂತೆ ನಡೆದರೆ ಕೀರ್ತಿಯ ಕೊಡುವ
ಭಕುತರ ಹೃದಯದಿ ತಾ ನೆಲೆಸಿರುವ ||೧೧||
ಭಕುತರೊಡನೆ ಕೂಡಿ ಹುಣ್ಣಿಮೆ ದಿನ ಹೋಮ ಮಾಡಿ
ಬರುವ ಭಕ್ತಗೆ ಭೋಜನ ನೀಡಿ
ನಗುತ ನಲಿಸುವ ಭಜನೆಯ ಪಾಡಿ ||೧೨||
ರಾಮನಾಮ ಸ್ಮರಿಸಿ ಜನರನು ಶುದ್ಧ ಮನದಿ ಹರಸಿ
ಬಿಂದುಮಾಧವ ನಾಮಾಂಕಿತ ಧರಿಸಿ
ಈ ಧರೆಯೊಳಗೆ ಸದ್ಗುರು ನೆಲೆಸಿ ||೧೩||
0 ಕಾಮೆಂಟ್‌ಗಳು