|| ದುರ್ಗಾ ಸ್ತುತಿ ||
ದುರ್ಗೆ ಪಾಲಿಸೆ ಕರುಣದಿ ॥ಪ॥
ದುರ್ಗೆ ಪಾಲಿಸೆ ಅಪವರ್ಗ ಪದವಿ ಇತ್ತು
ದುರ್ಗಮವಾಗಿಹ ದುಃಖವ ಬಿಡಿಸಿ
ಭಾರ್ಗವಿರಮಣನ ಮಾರ್ಗವ ತೋರೆ
ಭೋರ್ಗರೆಯುತ ಖಳರ ನಿಗ್ರಹಿಸುವಳೆ ॥ಅ.ಪ॥
ಕ್ಷೀರವಾರಿಧಿ ತನಯೆ । ಶ್ರೀ ರಮಣನ ಜಾಯೆ
ನಾರಸಿಂಹನ ಅರಸಿಯೆ
ಸಾರಿದೆ ನಿನ್ನ ಪದ ತೋರಿಸೆ ಹರಿಪದ
ಕಾರುಣ್ಯಾತ್ಮಳೆ ಕರುಣವ ಬೀರೆ
ವಾರವಾರಕೆ ನಿನ್ನ ಆರಾಧಿಸುವಂಥ
ಚಾರುಮತಿಯ ನೀಡೆ ನಾರಿರನ್ನಳೆ ॥೧॥
ಪದ್ಮಾವತಿಯೆ ಪದ್ಮಿನಿ । ಪದ್ಮಾಕ್ಷಿದೇವಿ
ಪದ್ಮಸಂಭವೆ ಕಾಮಿನಿ
ಪದ್ಮನಾಭ ಶ್ರೀ ಶ್ರೀನಿವಾಸನ
ಪದ್ಮಪಾದ ಹೃತ್ಪದ್ಮದಿ ತೋರೆ
ಪದ್ಮಸರೋವರ ತೀರವಾಸಿ ಕರ
ಪದ್ಮಯುತಳೆ ಮುಖಪದ್ಮವ ತೋರೆ ॥೨॥
ರೂಪತ್ರಯಳೆ ಕಾಮಿನಿ । ಕಾಮಪೂರಿಣೀ
ತಾಪವ ಹರಿಸೆ ಭಾಮಿನಿ
ಪಾಪಗಳಲ್ಲವ ನೀ ಪರಿಹರಿಸುತ
ಗೋಪಾಲಕೃಷ್ಣವಿಠ್ಠಲನನು ತೋರುತ ನೀ
ಕೃಪೆಗೈಯ್ಯೆಂದೀ ಪರಿ ನುಡಿವೆನೆ
ನೀ ಪಾಲಿಸುವುದು ಅಪವರ್ಗದಲಿ ॥೩॥
0 ಕಾಮೆಂಟ್‌ಗಳು