ರಾಮನ ಕಂಡಿರಾ
ರಾಮನ ಕಂಡಿರಾ|ನಮ್ಮ ರಾಮನ ಕಂಡಿರಾ||ಪ||
ರಾಮನ ಸ್ವಾತ್ಮಾರಾಮನ ಜಗದಭಿ
ರಾಮನ ಸತ್ಯಪ್ರೇಮನ ಶ್ರೀರಘು || ಅ ಪ ||
ನಿತ್ಯತೃಪ್ತನವನು|ಲೀಲಾ|ಮರ್ತ್ಯ ವೇಷದವನು |
ಸತ್ಯ ಧರ್ಮಗಳ ಮೂರ್ತಿಯು ಕೃತ್ಯಾ
ಕೃತ್ಯವನರುಹಲಿಕಿತ್ತ ಬಂದವನು || 1 ||
ದಶರಥ ನಂದನನು | ಕೌಸಲ್ಯೆಯ |
ಬಸಿರೊಳು ಬಂದವನು |
ಅಸಮ ಪರಾಕ್ರಮ ಬಿಸಜ ಸಖನಕುಲ
ಯಶೋಬ್ಧಿ ಚಂದ್ರನು ಸದ್ಗುಣ ಸಾಂದ್ರನು||2||
ಲಕ್ಷ್ಮಣ ಸಖನವನು | ಸಕಲ ಸು |
ಲಕ್ಷಣ ಯುತನವನು |
ಶಿಕ್ಷಿತ ವೇದಾದ್ಯಕ್ಷರ ವಿದ್ಯನು |
ದಕ್ಷನು ಶರಗಳ ಲಕ್ಷ ವೇದದಲಿ ||3||
ಭರತಬಂಧುವವನು|ಕರುಣಾ |
ಭರಿತ ಸಿಂಧುವವನು|
ಶರಣಾಗತ ಶತ್ರುಘ್ನನು ಯೋಗಿಗಳ್ - ಅರಸಿ
ಕಾಣದಿಹ ಪರತರ ರೂಪನು||4||
ಅಚ್ಯುತಾತ್ಮನವನು|ಭಕ್ತಿಗೆ|ಮೆಚ್ಚಿ ತೋರುವವನು |
ಸ್ವಚ್ಛ ಹೃದಯದವರಿಚ್ಛೆಯ ಸಲಿಸುವ
ನೆಚ್ಚಿನ ಬಿರುದಿನ ಸಚ್ಚಿದಾನಂದನು||5||
0 ಕಾಮೆಂಟ್‌ಗಳು