|| ರಾಮ ಮಂಗಳ ॥
ರಾಗ : ಮಧ್ಯಮಾವತಿ
ತಾಳ : ಆದಿ
ರಾಮ ಪಾವನ ನಾಮ ಇನಕುಲ |
ಸೋಮಮಂಗಳ ಮೂರುತಿ | |
ರಾಮ ಮೇಘಶ್ಯಾಮ ।
ರಿಪುಗಣಧೀಮ ನಿನಗಿದು ಆರುತಿ॥ಪಲ್ಲವಿ ||
ರಾಮನಾಮದ ಒಳಗೆ ಅಡಗಿದೆ।
ವೇದ ವೇದಗಳರ್ಥವು||
ರಾಮ ಜೀವನದೊಳಗೆ ಮಾನವ|
ಜೀವ ಸಾರ್ಥಕ ಗುಣಗಳು||
ರಾಮ ಜಗದಭಿ|ರಾಮ ಕರುಣಾಧಾಮ|ಭಕ್ತರ ಪಾಲಿಗೆ |
ಯಜ್ಞ ಜೀವನನಾಗಿಬಾಳಿದ ।
ವ್ಯಕ್ತಿಗುಂಟೇ ಹೋಲಿಕೆ ॥ ರಾಮಪಾವನ|| 1
ಅಚ್ಚುಮೆಚ್ಚಿನ ಪುತ್ರತಮ್ಮರ ಜೀವನಾದವನೀತನು ॥
ಆಪ್ತಸಖ ಪ್ರಜೆಗಳಿಗೆ ತನ್ನೇ।
ಕೊಡುವ ಸ್ವಾಮಿಯು ಈತನು ॥
ಸತಿಗೆ ಸೀತೆಗೆ ಜೀವನಾಡಿಯು|
ಹನುಮನಿಗೆ ಪರಂಧಾಮನು ॥
ಲೋಕಸೇವೆಗೆ ತನ್ನನೊಡ್ಡಿದ ।
ಇವನೆ ರಘುಕುಲ ರಾಮನು ॥ ರಾಮಪಾವನ ॥ 2
ನಿನ್ನ ನೆನೆಯಲು ತುಂಬಿ ಬರುವುದು|
ಹೃದಯ ಜಾನಕಿರಾಮನೇ॥
ನಿನ್ನ ನೆನೆಯಲು ಪುಳಕ ಮೈಯಲಿ
ಎಂಥ ಅದ್ಭುತ ಚರಿತನೇ |
ನಿನ್ನ ನೆನೆಯಲು ಬಾಳು ಪಾವನ ।
ಪರಮ ಗುಣಗಣ ಮೂರ್ತಿ ನೀ॥
ನಿನ್ನ ನೆನೆಯಲು ಭವದ ಬಂಧನ |
ಕಳಚುವುದು । ಅಘಹಾರಿನಿ ॥ರಾಮಪಾವನ ॥3
ಮಂಗಳವು ಶ್ರೀ ರಾಮಚಂದ್ರಗೆ|
ಮ೦ಗಳವು ವೈದೇಹಿಗೆ ॥
ಮಂಗಳವು ನಿಜಭಕ್ತ ಕೋಟಿಗೆ।
ಮಂಗಳವು ಹನುಮಂತಗೆ ||
ಮಂಗಳಂ ಜಯ ಮಂಗಳಂ ಜಯ
ಮಂಗಳಂ ಜಯ ಮಂಗಳಂ |
ಮಂಗಳಂ ಜಯ ಮಂಗಳಂ ಜಯ ।
ಮಂಗಳಂ ಜಯ ಮಂಗಳಂ | 4
॥ ಮಂಗಳಂ ಕೋಸಲೇಂದ್ರಾಯ।
ಮಹನೀಯಗುಣಾತ್ಮನೇ ||
ಚಕ್ರವರ್ತಿ । ತನೂಜಾಯ ।
ಸಾರ್ವಭೌಮಾಯ ಮಂಗಳಂ ॥
|| ಓಂ ತತ್ಸತ್ ||
0 ಕಾಮೆಂಟ್‌ಗಳು