ಶ್ರೀ ಶ್ರೀಗಳವರ ಪೂರ್ವಜರು - ಸತ್ಯಪ್ರತಿಜ್ಞೆಯ ಈಶ್ವರಿ ಸಂತತಿ | ಪಟಗುಪ್ಪೆ ಶ್ರೀ ಸುಬ್ಬಾಶಾಸ್ತ್ರಿಗಳೂ

 || ಶ್ರೀ ಶ್ರೀಗಳವರ ಪೂರ್ವಜರು ||



ಸತ್ಯಪ್ರತಿಜ್ಞೆಯ ಈಶ್ವರಿ ಸಂತತಿ |

ಪಟಗುಪ್ಪೆ ಶ್ರೀ ಸುಬ್ಬಾಶಾಸ್ತ್ರಿಗಳೂ ॥

ಸತ್ವಮೂರ್ತಿಯು ಹರಿದ್ವಾರ ಬದರಿಯಲಿ ।

ಕೋಟಿ ಲಿಂಗಾರ್ಚನೆಗೈದಿರಲೂ ॥ 


ನರಸಿಂ ಹಭಾರತಿಸ್ವಾಮಿಗಳಿವರನ್ನು । 

ಶೃಂಗೇರಿ ಕ್ಷೇತ್ರಕ್ಕೆ ಕರೆಸಿದ್ದರು । 

ಪರಮಾನುಗ್ರಹದಿಂದ ಸೌಕರ್ಯ ಕಲ್ಪಿಸಿ । 

ಈ ಸಂಸ್ಥಾನದಿ ನಿಲ್ಲಿಸಿದ್ದರು ॥ ೧॥ 


ಶೃಂಗೇರಿ ಕ್ಷೇತ್ರದಿ ಇವರ ಸುಪುತ್ರರು । 

ಗೋಪಾಲ ಶಾಸ್ತ್ರಿಗಳಿರುತಿರಲು ॥ 

ಮಂಗಳ ಸಾಧ್ವಿಯು ಪತಿವ್ರತ ಭಕ್ತಿಯ । 

ಲಕ್ಷ್ಮಮ್ಮ ಪತ್ನಿಯರೊಡನಿರಲು ॥೨॥



ವೇದ ವೈದಿಕ ಧರ್ಮಶಾಸ್ತ್ರ ಪ್ರಮಾಣದಿ |

ಮಹದೇವನರ್ಜಿಸಿ ಸುಖಿಸಿರಲು ॥

ಆದರಿಸುತ ಪತಿಪಾದವ ಪೂಜಿಸಿ |

ಪಾರ್ವತಿಕೃಪೆ ಸತಿ ಪಡೆದಿರಲು  || ೩ ||


ಜನ್ಮವೆತ್ತಿದ ಮಕ್ಕಳುಳಿಯದೆ ಹೋಗಲು ।

ತಮ್ಮಯ ಕರ್ಮಕ್ಕೆ ವ್ಯಥೆ ಪಡುತ ॥

ಬ್ರಹ್ಮನ ಬರಹವ ಮೀರುವರ್ಯಾರೆಂದು ।

ಮುಂದಿನ ಬಾಳ್ವೆಗೆ ಯೋಚಿಸುತ  || ೪ ||


ಯಶೋದೆ ಮಕ್ಕಳಿಗ್ಹಂಬಲಿಸಿದ ವ್ಯಥೆ

ಲಕ್ಷ್ಮಮ್ಮನವರಿಗೆ ಉಂಟಾಯಿತು ॥

ವಂಶಾಭಿವೃದ್ಧಿಗೆ ಸುಕುಮಾರನಂ ನೋಡ ।

ಲಾಂತರ್ಯ ಚಿಂತೆಯು ಬಲವಾಯಿತು || ೫||


ಈ ಪರಿತಾಪವ ಪತಿಯೆದುರ್ಹೇಳಲು ।

ಸಮಯಾನುಕೂಲವ ಕಾದಿದ್ದರು ॥

ಶ್ರೀಪತಿ ಸೇವೆಗೆ ತೀರ್ಥಯಾತ್ರೆಯ ಗೈವ ।

ತಮ್ಮಭಿಪ್ರಾಯವ ತಿಳಿಸಿದರು || ೬||


ದೃಢಮತಿಯಿಂದಲಿ ನೃಸಿಂಹಭಾರತಿ ।

ಸ್ವಾಮಿಗಳನುಗ್ರಹ ಕೈಗೊಳ್ಳುತ ॥ 

ಉಡುಪಿ ಗೋಕರ್ಣದ ಸಂಚಾರದಿಂದಲಿ ।

ವಿಶ್ವೇಶನಡಿಗಳ ಪೂಜಿಸುತ  ||೭||


ಅತಿಶಯ ಭಕ್ತಿಲಿ ಧ್ಯಾನ ತಪಸ್ಸಲಿ |

ಶಂಕರ ಗುರುಪಾದ ಧ್ಯಾನಿಸುತ ॥

ಪತಿ ಧ್ಯಾನಾಸಕ್ತಿಯ ಮಹಾಯೋಗಶಕ್ತಿಯ |

ಅನಸೂಯ ಅತ್ರಿಯರಂತಿರುತ ||೮||


ಪೂರ್ವಪುಣ್ಯಾರ್ಜಿತ ಸುಕೃತದ ಪ್ರಾಪ್ತಿಗೆ । 

ಜಗದಂಬೆ ಶಾರದೆ ॥ ಭಜಿಸುತಲಿ ॥ 

ಸರ್ವಕಾಲವು ಮಲಹಾನಿಕರೇಶ್ವರ | 

ಭವಾನಿಪ್ರಾರ್ಥನೆ ಎಸಗುತಲಿ ॥ ೯॥ 


ಗೋಕರ್ಣಕ್ಷೇತ್ರದಿ ಮಹಾಬಲೇಶ್ವರಪೂಜೆ । 

ಮಾಡಿದ ಪುಣ್ಯದ ಫಲದಿಂದಲಿ ॥ 

ಸಾಕಾರದಿಂ ಶಿವ ಅನುಗ್ರಹಗೈದಿಹ । 

ಬಿಲ್ವ ಪ್ರಸಾದದ ಮಹಿಮೆಯಲಿ ॥೧೦॥ 


ಸುಪುತ್ರ ರತ್ನೋದ್ಭವ ನರಸಿಂಹ ಭಾರತಿ
ಸ್ವಾಮಿಯ ಕೃಪೆಯೊಳು 


ನರಸಿಂಹಭಾರತಿ ಸ್ವಾಮಿಯ ಕೃಪೆಯೊಳು । 

ಮನದಲಿ ಶಾಂತಿಯ ತಾಳಿದರು ॥ 

ಪರಮ ಯತೀಂದ್ರರ ಕರುಣ ಕಟಾಕ್ಷದಿ । 

ಈ ಪುತ್ರರತ್ನವ ನೋಡಿದರು ॥೧೧॥ 


ನಂದನವರ್ಷ ಆಶ್ವ್ಮೀಜದ ಬಹುಳ । 

ಏಕಾದಶಿಯದಿನ ಕಂದನುದಿಸಿರಲು ॥

ಆದಿಶಂಕ್ರಾಚಾರ್ಯರನುಪಮ ಶಿಷ್ಯರ । 

ಸನಂದನರ ಪೂರ್ಣ ಕಳೆಯಿರಲು ॥ ೧೨॥ 


ಉತ್ಸಾಹದಲಿ ಶಿಶು ಜನ್ಮದಿನೋತ್ಸವ । 

ವಿಪ್ರರಿಂದೊಡಗೂಡಿ ನಡೆಸಿದರು ॥ 

ಪ್ರೋತ್ಸಾಹದಿಂದಲಿ ಮುತ್ತೈದೆರಂದಿನ । 

ಸಂಪ್ರದಾಯದ ಶಾಸ್ತ್ರ ಮುಗಿಸಿದರು ॥ ॥ ೧೩ ॥


ನರಸಿಂಹದೇವರ ಹೆಸರಿಟ್ಟು ಕೂಸಿಗೆ ।

ನಾಮಕರಣ ಪೂರೈಸಿದರು ॥ 

ಮರೆಯದೆ ಶ್ರೀ ಗುರುಪಾದವ ಪೂಜಿಸಿ ।

ಹರಿನಾಮಸ್ಮರಣೆಯ ಮಾಡಿದರು  ॥ ೧೪ ॥ 


ಮೊದಲಿನ ಮಕ್ಕಳು ಕಣ್ಮರೆಯಾಗಲು

ವಿಧಿಯ ವಿಲಾಸಕೆ ಚಿಂತಿಸುತ ॥

ಉದಿಸಿಹ ಈ ಕಂದನಾಯುಸ್ಸು ಹೆಚ್ಚಲು|

ವಿಧವಿಧ ದೇವರ ಧ್ಯಾನಿಸುತ   ॥ ೧೫ ॥ 


ಲಕ್ಷ್ಮೀದೇವಿಯು ತಮ್ಮ ಪತಿಪಾದಕೊಂದಿಸಿ ।

ಈ ಕೂಸನುಳಿಸಲು ಪ್ರಾರ್ಥಿಸಲು ॥ 

ಲಕ್ಷ್ಯದಿಂ ಪತಿನೋಡಿ ಮೃತ್ಯುಂಜಯನ ಬೇಡಿ ।

ಮಲ್ಲಿಕಾರ್ಜುನ ಗುಡಿಗರ್ಪಿಸಲು   ॥ ೧೬ ॥ 


ಪರಮೇಶ್ವರಿ ಕೃಪೆಯಿಂದಲಿ ಕಂದನು ।

ಶಿವಲಿಂಗದ ಬಳಿ ಸೇರಿದ್ದಿತು ॥

ವರಪುತ್ರ ತನ್ನಯ ಸನ್ನಿಧಿಸೇರಲು ।

ಶಿವನಿಗೆ ಸಂತೋಷವಾಗಿದ್ದಿತು ||೧೭ ॥


ಭವಾನಿಶಂಕರ ಸುಕುಮಾರನಂ ಕಂಡು |

ಬ್ರಹ್ಮ ವಿದ್ಯಾಗ್ರ ಗಣ್ಯನಾಗೆನ್ನಲು ॥ 

ಭವಾನಿದೇವಿಯು ಅಮೃತವ ಊಡಿಸಿ ।

ದೀರ್ಘಾಯುವೆನ್ನುತ ಸಂತೈಸಲು ॥ ೧೮ ॥ 


ಸಪ್ತ ಋಷಿಗಳೆಲ್ಲ ಸ್ವಸ್ತಿ ವಾಚನದಿಂದ ।  

ಸರ್ವಜ್ಞ ಮೂರ್ತಿಯೆಂದ್ಹರಸಿದರು ॥ 

ಮಾತೃಕೆಯರು ತಮ್ಮಯ ಬಳಗದಿ ।

ಸುಪುಷ್ಪ ವೃಷ್ಟಿಯ ಸುರಿಸಿದರು    ॥೧೯॥


ಮಗುವಲ್ಲಿ ಮೌನದಿ ಚಂದ್ರಕಾಂತಿಯೊಳಿರೆ । 

ಅಪ್ಪೂ ಜೋಯಿಸರೆಂಬ ಜ್ಯೋತಿಷ್ಯರು ॥ 

ನಗು ಮೊಗದೊಳಗಿದ್ದ ಬಾಲನ ಮುದ್ದಿಸಿ । 

ಮುಂದಿನ ಮೇಲ್ಮೆಯ ಬಯಸಿದರು ॥ ॥ ೨೦ ॥ 


ಜಗದಭಿರಾಮನ ಲೀಲೆಯ ಯೋಚಿಸಿ । 

ಸಗುಣಮೂರ್ತಿಯ ಧ್ಯಾನಮಾಡಿದರು | 

ಅಘಟಿತ ಘಟನ ಕಟಾಕ್ಷನ ಪ್ರಾರ್ಥಿಸಿ । 

ಮಗುವನು ತಾಯಿಗೆ ತಂದಿತ್ತರು ॥ ॥ ೨೧॥ 


ಮನದಲಿ ಶಾರದದೇವಿಯ ಭಜಿಸಲು । 

ಘನತರ ಭಕ್ತಿಯ ಅರುಹಿದರು ॥ 

ದಿನದಿನ ಕಂದನು ವೃದ್ಧಿಯ ಹೊಂದಲು । 

ಆಶೀರ್ವದಿಸಿ ತೃಪ್ತಿ ಹೊಂದಿದರು ॥ ॥ ೨೨॥ 


ಶ್ರೀ ಶ್ರೀ ಗಳ ಬಾಲ್ಯ ಮತ್ತು ವಿದ್ಯಾಭ್ಯಾಸ 


ಕ್ಷೀರಹಾರವ ಕೊಟ್ಟು ವಾತ್ಸಲ್ಯ ಭಾವದಿ । 

ತಾಯಿಯು ಕೂಸನು ಸಲಹಿದರೂ ॥ 

ವಿರಾಮಕಾಲದಿ ಸುಜ್ಞಾನ ಬೋಧೆಯ | 

ಸತ್ಕಥಾ ಶ್ರವಣವ ಕೊಡುತ್ತಿದ್ದರೂ ॥ ॥ ೨೩॥ 


ತಪ್‌ಹೆಜ್ಜೆ ಇಡುತಲಿ ತೊದಲ್ನುಡಿಯಾಡುತ । 

ಕಂದನು ಮುನಿಜನಕ್‌ ಹರ್ಷಿಸಲೂ ॥ 

ಒಪ್ಪುವ ಲಕ್ಷಣ ಚಿನ್ಹೆಗಳಾಟದಿ | 

ಜನತೆಗೆ ಸಂತೋಷವಾಗಿರಲೂ ॥ ॥ ೨೪ ॥


ಬಾಲನ ಮೇಲ್ಮೆಯ ಪಾಲನೆಯೋಚಿಸಿ ।

ನೆರೆಹೊರೆ ಗೃಹಜನ ಪ್ರೀತಿಸಲೂ ॥

ಫಾಲಾಕ್ಷನರ್ಚನೆ ಭಜನೆಯ ಆಟದಿ ।

ಬಾಲ್ಯನ ಕಂದನು ಕಳೆದಿರಲೂ  ॥ ೨೫ ॥ 


ಬ್ರಾಹ್ಮಣ್ಯಧರ್ಮದ ನಿರ್ಣಯಶಾಸ್ತ್ರದಿ ।

ಚೌಲೋಪನಯನವ ಮಾಡಿದರೂ ॥

ಬ್ರಾಹ್ಮೀವಲುಮೆ ದಿವ್ಯ ಜಪತಪ ಸಾಧನೆ । 

ಬ್ರಹ್ಮಚಾರಿವ್ರತ ಅರುಹಿದರೂ  ॥ ೨೬॥ 


ದುರ್ಗುಣವರ್ಚಿಸಿ ಸದ್ಗುಣಸಾಧಿಸಿ |

ನಿರ್ಧರದಲಿ ವಟು ಬೆಳದಿರಲೂ ॥

ನಿರ್ಗುಣರೂಪದ ಸದ್ಗುರು ಅರಸುವ ।

ವೆಗ್ಗಳ ಮನವನು ಗಳಿಸಿರಲೂ   ॥ ೨೭॥ 


ಹರಿಹರ ಬ್ರಹ್ಮರ ಚಹರೆ ಸ್ವಭಾವವು । 

ವರಬಾಲನಾಟದಿ ಹೊರಹೊಮ್ಮಿತೂ ॥

ಹರಗುರುಶಂಕರ ತಿರುಗಿಲ್ಲಿ ಹುಟ್ಟಿದ ।

ಶ್ರೀ ದಕ್ಷಿಣಾಮೂರ್ತಿ ಬಲ ಕಂಡಿತೂ  ॥ ೨೮ ||


ಬಾಲ್ಯದಿ ತಾಯ್ತಂದೆಗೊಂದಿಸಿ ಸಂಪೂರ್ಣ । 

ಸಂಸ್ಕೃತ ವಿದ್ಯೆಯ ಕಲಿತಿಹರೂ ॥

ಮೇಲಾಗಿ ಶ್ರೀಗುರುಕೃಪೆಯ ಕಟಾಕ್ಷದಿ ।

ಪಂಡಿತಪ್ರಾಜ್ಯರೆಂದೆನಿಸಿದರೂ   ॥ ೨೯ ॥



ಗೃಹಧರ್ಮ ವೃದ್ಧಿಗೆ ಕಲ್ಯಾಣ ಮಾಡಲು 

ಮನೆಜನದಲಿ ಪ್ರಯತ್ನವೌ ನಡೆದೂ ॥ 

ಮಹಯೋಗಿ ನರಸಿಂಹಸ್ವಾಮಿಯ ಕೇಳಲು । 

ಇದಕವಕಾಶ ಕೊಡದೆ ತಡೆದೂ ॥ ॥೩೦॥ 


ಮುಂದಿನ ಬಾಳ್ವೆಯ ಮೇಲ್ಮೆಯ ಯೋಚಿಸಿ | 

ಇಂದಿನಿಂದಲೆ ವೇದ ಕಲಿಯಲೆಂದೂ ॥ 

ಅಂದಿನಿಂ ವಿದ್ಯಾಭಿವೇದ್ಧಿಯ ಹೊಂದಲು । 

ಪಾದುಕೆಯನು ಕೊಟ್ಟು ಹರಸಿದರೂ ॥ ॥೩೧॥ 


ನರಸಿಂಹಭಾರತಿ ಶ್ರೀಗಳು ಮೌನದಿ । 

ಶಾರದೆ ಪ್ರಾರ್ಥಿಸಿಕೊಂಡಿದ್ದರೂ ॥

ನರಸಿಂಹ ಶಾಸ್ತ್ರಿಯೊಳಾವಿರ್ಭವಿಸೆಂದು । 

ಶ್ಲೋಕರೂಪದಿ ಸ್ತೋತ್ರ ಮಾಡಿದ್ದರೂ ॥ ॥ ೩೨ ॥ 


ಶ್ರೀಗುರುಪಾದುಕೆ ಶಾರದೆಕ್ಕಪೆಯಿಂದ । 

ವೇದವೇದಾಂತವ ಪೂರೈಸುತಾ ॥ 

ಯೋಗತತ್ವಾರ್ಥದಿ ಅದ್ವೈತ ಜ್ಯೋತಿಷ್ಯ । 

ತರ್ಕಮೀಮಾಂಸದಿ ಬಲಹೊಂದುತಾ ॥ ೩೩ ॥ 


ಸಂಸ್ಕೃತದಲಿ ನಾಟಕಾಂತಸಾಹಿತ್ಯದಿ |

ಪ್ರತಿಭಾಶಾಲಿಗಳೆಂದೆನಿಸಿದರೂ ॥ 

ಸಂಸ್ಕೃತಿಯಲಿ ಸದ್ಗುಣ ಗಣ ಪ್ರಾಜ್ಯರು । 

ಜಗದ್ವಿಖ್ಯಾತಿಯ ಪಡೆದಿಹರೂ ॥ ॥ ೩೪ ॥ 


ಶ್ರೀ ಶ್ರೀ ನರಸಿಂಹ ಭಾರತಿ ಯೋಗೀಂದ್ರ ನಿರ್ಯಾಣ 


ನರಸಿಂಹಭಾರತಿ ಯೋಗೀ೦ದ್ರರಂತ್ಯದಿ ।

ಬ್ರಹ್ಮರಂಧ್ರ ಭೇದಿಸ್ಯ್ಹೋರ ಹೊರಟರೂ ॥

ಪರಿಪೂರ್ಣ ಜ್ಯೋತಿಯ ಓಂಕಾರ ಪ್ರಣವದಿ । 

ಆತ್ಮಪ್ರಭೆಯಸ್ಥಾನ ಸೇರಿದರೂ ॥ ॥ ೩೫ ॥


ಶಂಭೂ ಸ್ಮರಣೆಯೊಳು ಭೋಂಕಾರ ಘೋಷದಿ ।

ಆತ್ಮಾರಾಮನೊಳೈಕ್ಯ  ವಾಹಿಹರೂ ॥ 

ನಂಬಿದ ಶಿಷ್ಯರಿಗನುಗ್ರಹಿಸಿ ತಾವು । 

ಅಂಬರಮಧ್ಯದಿ ನೆಲಸಿಹರೂ ॥ ॥ ೩೬ ॥ 


ಪ್ರತ್ಯಕ್ಷ ಈಶ್ವರ ಅದೃಶ್ಯವಾದಂಥ । 

ವಿಸ್ಮಯ ವ್ಯಸನವು ಪ್ರಜೆಗಾಯಿತೂ ॥ 

ನಿತ್ಯಾತ್ಮನರಿಯುವ ಅದ್ವೈತ ಬೋಧೆಯ | 

ಸದ್ಗುರು ಮಂತ್ರವು ಸ್ಥಿರವಾಯಿತೂ ॥ ೩೭ ॥ 


ಶ್ರೀ ಶ್ರೀ ತಪಶ್ಚಕ್ರವರ್ತಿ ಪಟ್ಟಾಭಿಷೇಕ 

 

ಮೊದಲಿನ ಯೋಗೀಂದ್ರರನುಗ್ರಹದಿಂದಲಿ । 

ನಿಂದರು ಜಗದ್ಗುರು ಸ್ಥಾನದಲೀ ॥ 

ವಿಧಿವತ್ಸನ್ಯಾಸದ ಪೀಠಾಧಿಕಾರದಿ । 

ಪಟ್ಟಾಭಿಷೇಕವ ಹೊಂದುತಲೀ ॥ ೩೮ ॥ 


ಶ್ರೀಮತ್ಪರೀಧಾವಿ ಸಂವತ್ನರ ಚೈತ್ರ । 

ಕೃಷ್ಣ ಷಷ್ಠಿಯ ರವಿವಾರದಲೀ ॥ 

ಶ್ರೀಮಜ್ಜಗದ್ಗುರು ಪದವಿಯ ಪೀಠದಿ ।

ಬ್ರಹ್ಮಾನುಸಂಧಾನ ಗೈಯ್ಯುತಲೀ ॥ ॥೩೯॥


ಶ್ರೀಸಚ್ಚಿದಾನಂದ ಶಿವಾಭಿನವ ಶ್ರೀ ।

ನರಸಿಂಹಭಾರತಿವರಬಲದೀ ॥

ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ।

ಬಿರುದಾಂಕಿತಗಳಿಹ ಸುಸ್ಥಳದೀ   ॥ ೪೦ ॥ 


ಶ್ರೀಚಂದ್ರಶೇಖರಭಾರತಿಸ್ವಾಮಿಗ ।

ಳೆಂಬಭಿದಾನದಿ ನೆಲಸಿಹರೂ ॥

ಶ್ರೀಚಂದ್ರಮೌಳೀಶ ಪ್ರತ್ಯಕಲಭಿಸಿದ ।

ರೂಪದಿ ದರ್ಶನಕೊಡುತಿಹರೂ   ॥ ೪೧ ॥ 


ವ್ಯಾಖ್ಯಾನ ಸಿ೦ಹಾಸನಾಸ್ಥಾನದಲಿ ಮಹಾ |

ವಾಕ್ಯೋಪದೇಶವ ಪಡೆದಿಹರೂ ॥

ವಾಕ್ಯಾರ್ಥ ಅದ್ವೈತ ಬ್ರಹ್ಮವಿದ್ಯಾತತ್ತ್ವ ।

ಸಿದ್ಧಿಸೊ ಸದ್ಬೋಧೆ ತಿಳಿಸುವರೂ  ॥ ೪೨ ॥ 


ಯೋಗೇಂದ್ರರಿವರಿಗೆ ತಪಶ್ಚಕ್ರವರ್ತಿಯ |

ಕಿರೀಟಧಾರಣೆ ಗೈದಿಹರೂ ॥

ಯೋಗಾಭ್ಯಾಸದಿ ಪೂರ್ಣಸರ್ವಜ್ಞರಾಗಲು

ಭಾರತಿಗುರು ಆಶೀರ್ವದಿಸಿದರೂ  ॥ ೪೩ ॥ 


ಕಾಷಾಯಾಂಬರಧಾರಿ ದಂಡ ಕಮಂಡಲ ।

ಮುಕ್ಷಾಕ್ಷ ಮಾಲೆಯ ಧರಿಸಿಹರೂ ॥

ಭಸ್ಮಾಲಂಕಾರದಿ ಸ್ಪಟಿಕ ರುದ್ರಾಕ್ಷಿಯ ।

ಜಪಸರದಿಂ ಶಿವನಂತಿಹರೂ      ॥ ೪೪ ॥ 


ಮೇದಿನಿಯೊಳು ಸರ್ವದೇವ ಸಮೂಹವು ।

ಈ ಉತ್ಸವದಿ ಬಂದು ಸೇರಿದ್ದಿತೂ ॥

ಸಾಧುಸಂತರು ಅವಧೂತ ಯೋಗೀಂದ್ರರು |

ಶಿಷ್ಟವರ್ಗದ ಗುಂಪು ಕೂಡಿದ್ದಿತೂ  ॥ ೪೫ ॥ 



























 














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು