ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ - Jai Jai Rama Hare Jai Jai Krishna Hare

|| ರಾಮ ಕೃಷ್ಣ ಸ್ತುತಿ ||

ರಚನೆ : ಶ್ರೀ ವರದೇಶ ವಿಠ್ಠಲದಾಸರು

ರಾಗ : ಅಭೇರಿ

ತಾಳ : ಏಕ 



ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ॥

ರಾಮ ರಾಮ ಹರೇ ಕೃಷ್ಣ ಕೃಷ್ಣ ಹರೆ ||


ಕೌಸಲ್ಯಜ ವರ ವಂಶೋದ್ಭವ ಸುರ

ಸಂಸೇವಿತ ಪದ ರಾಮ ಹರೇ

ಕಂಸಾದ್ಯಸುರರ ಧ್ವಂಸಗ್ರೈದ ಯದು

ವಂಶೋದ್ಭವ ಶ್ರೀ ಕೃಷ್ಣ ಹರೇ  ||೧||


ಮುನಿಮಖರಕ್ಷಕ ದನುಜರ ಶಿಕ್ಷಕ

ಫಣಿಧರ ಸನ್ನುತ ರಾಮ ಹರೇ

ಘನವರ್ಣಾಂಗ ಸುಮನಸರೊಡೆಯ ಶ್ರೀ

ವನಜಾಸನ ಪಿತ ಕೃಷ್ಣ ಹರೇ ||೨||


ತಾಟಕಿ ಖರಮಧುಕೈಟಭಾರಿ ಪಾಪಾಟವಿ

ಸುರಮುಖ ರಾಮ ಹರೇ

ಆಟದಿ ಫಣಿ ಮ್ಯಾಲ್‌ ನಾಟ್ಯವನಾಡಿದ

ಖೇಟವಾಹ ಶ್ರೀ ಕೃಷ್ಣ ಹರೇ || ೩||


ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ

ಸುಲಲಿತ ಮಹಿಮ ಶ್ರೀ ರಾಮ ಹರೇ

ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ

ಚೆಲುವೆಯ ಮಾಡಿದ ಕೃಷ್ಣ ಹರೇ  ||೪||


ಹರ ಧನು ಭಂಗಿಸಿ ಹರುಷದಿ ಜಾನಕಿ

ಕರವ ಪಿಡಿದ ಶ್ರೀ ರಾಮ ಹರೇ

ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ

ಕರುಣಾಕರ ಶ್ರೀ ಕೃಷ್ಣ ಹರೇ  ||೫||


ಜನಕ ಪೇಳೆ ಲಕ್ಷ್ಮಣ ಸೀತಾ ಸಹ

ವನಕೆ ತೆರಳಿದ ರಾಮ ಹರೇ

ವನಕೆ ಪೋಗಿ ತನ್ನಣುಗರೊಡನೆ ಗೋವನು

ಪಾಲಿಪ ಶ್ರೀ ಕೃಷ್ಣ ಹರೇ  ||೬||


ಚದುರೆ ಶಬರಿಯಿತ್ತ ಬದರಿಯ ಫಲವನು

ಮುದದಿ ಸೇವಿಸಿದ ಶ್ರೀ ರಾಮ ಹರೇ

ವಿದುರನ ಕ್ಷೀರಕೆ ಒದಗಿಪೋದ

ಪದುಮನಾಭ ಶ್ರೀ ಕೃಷ್ಣ ಹರೇ ||೭||


ಸೇವಿತ ಹನುಮ ಸುಗ್ರೀವನ ಸಖ

ಜಗತ್ಪಾವನ ಪರತರ ರಾಮ ಹರೇ

ದೇವಕಿ ವಸುದೇವರ ಸೆರೆ ಬಿಡಿಸಿದ

ದೇವ ದೇವ ಶ್ರೀ ಕೃಷ್ಣ ಹರೇ  ||೮||


ಧರೆಯೊಳಗಜ್ಞಜನರ ಮೋಹಿಪುದಕೆ

ಹರನ ಪೂಜಿಸಿದ ಶ್ರೀ ರಾಮ ಹರೇ

ಹರನ ಪ್ರಾರ್ಥಿಸಿ ವರವನು ಪಡೆದ

ಚರಿತೆ ಅಗಾಧವು ಕೃಷ್ಣ ಹರೇ ||೯||


ಗಿರಿಗಳಿಂದವರ ಶರಧಿಯ ಬಂಧಿಸಿದ

ಪರಮ ಸಮರ್ಥ ಶ್ರೀ ರಾಮ ಹರೇ

ಗಿರಿಯನು ತನ್ನ ಕಿರಿ ಬೆರಳಲೆತ್ತಿ ಗೋಪರನ

ಕಾಯ್ದ ಶ್ರೀ ಕೃಷ್ಣ ಹರೇ 


ಖಂಡಿಸಿ ದಶಶಿರ ಚೆಂಡಾಡಿದ

ಕೋದಂಡಪಾಣಿ ಶ್ರೀ ರಾಮ ಹರೇ

ಪಾಂಡು ತನಯರಿಂ ಚಂಡ ಕೌರವರ

ದಿಂಡು ಗೆಡಹಿದ ಕೃಷ್ಣ ಹರೇ  ||೧0 ||


ತವಕದಲ್‌ ಅಯೋಧ್ಯಾಪುರಕೈದಿದ ತನ್ನ

ಯುವತಿಯೊಡನೆ ಶ್ರೀ ರಾಮಹರೇ

ರವಿಸುತತನಯಗೆ ಪಟ್ಟವ ಕಟ್ಟಿದ

ಭವತಾರಕ ಶ್ರೀ ಕೃಷ್ಣ ಹರೇ  ||೧೧||


ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ

ತ್ವರದಲಿ ರಾಮ ಹರೇ

ವರಧರ್ಮಾದ್ಯರ ಧರೆಯೊಳು ಮೆರೆಸಿದ

ಪರಮ ಕೃಪಾಕರ ಕೃಷ್ಣ ಹರೇ ||೧೨||


ಅತುಳ ಮಹಿಮ ಸದ್‌ ಯತಿಗಳ ಹೃದಯದಿ

ಸತತ ವಿರಾಜಿಪ ರಾಮ ಹರೇ

ಸಿತವಾಹನ ಸಾರಥಿಯೆನಿಸಿದ ಸುರತತಿ

ಪೂಜಿತ ಪದ ಕೃಷ್ಣ ಹರೇ || ೧೩||


ರಾಮರಾಮ ಎಂದು ನೇಮದಿ ಭಜಿಪರ

ಕಾಮಿತಫಲದ ಶ್ರೀ ರಾಮ ಹರೇ 

ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ

ವಿಠಲ ಶ್ರೀ ಕೃಷ್ಣ ಹರೇ  ||೧೪||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು