|| ಶ್ರೀ ಗುರು ಸ್ತುತಿ ||
kannadabhajanlyrics.com |
ಶ್ರೀ ಗುರುವೆ ತವ ಪಾದ ನಂಬಿಹೆನೋ ಕರುಣಾಳು ಎನ್ನನು
ಬೇಗದಿಂದಲಿ ಕಾಯಬೇಕಯ್ಯಾ ॥ಪ॥
ಬಾಧಿಸುವ ಸಂಸಾರ ಜಲದಲಿ ।
ಶೋಧಿಸಲು ನಿಜಶಾಂತಿ ದೊರಕದು
ಸದ್ಗುರೋತ್ತಮ ಎನ್ನನೀಗಲೆ |
ಉದ್ಭರಿಸಿ ಸದ್ಗತಿಯ ಕರುಣಿಸು || ೧॥
ಹೆಣ್ಣು ಹೊನ್ನಿನ ಮಣ್ಣಿನಾಸೆಯೊಳು ।
ಅನವರತ ಬೆಳೆಯುತ
ನಿನ್ನ ಮರೆತೆನು ದೀನ ಜನ ಬಂಧು ।
ಕಣ್ಣು ಕಾಣದ ಕುರುಡನಂದದಿ
ಎನ್ನ ಗುರಿಯನು ಮರೆತು
ಬೇರೊಂದ್ಹಾದಿಯ ಪಿಡಿದು ಪೋಗದ ಮುನ್ನ ಕರಗಳ
ಪಿಡಿದು ನಡೆಸೈ ಜೀಯರೊಡೆಯನೆ ॥ ೨॥
ತುಚ್ಛ ವಿಷಯದ ಭೋಗದಿಚ್ಛೆಯಲಿ
ಅನವರತ ಬೆರೆಯುತ
ಹುಚ್ಚನಾದೆನು ಮರೆತು ನಿಜಗುರಿಯ ।
ಎಚ್ಚರಿಸಿ ಭವಭ್ರಾಂತಿ ಬಿಡಿಸುತ
ಉಚ್ಚಬೋಧೆಯ ತಿಳುಹುತೀಗಲೆ ॥
ನಿಶ್ಚಲದ ಸುಜ್ಜಾನ ಕರುಣಿಸು ಗುರುವೇ ॥ ೩॥
ಎಲ್ಲರೊಳು ಪರಮಾತ್ಮನಿಹನೆಂಬ ನಿಜಸೊಲ್ಲಸಾರಿದ
ಪುಲ್ಲಲೋಚನ ಪರಮ ಪಾವನನೆ ।
ಇಲ್ಲಿ ಭುವಿಯಲಿ ನಿನ್ನ ಸಮರಿನ್ನಿಲ್ಲ
ಎನ್ನನು ಕಾಯ್ದುದೀಗಲೇ
ನಿಲ್ಲಿಸೆನ್ನಯ ಮನವ ನಿನ್ನಯ ಸಲ್ಲಲಿತ
ತವ ಚರಣ ಯುಗಳದಿ ॥ ೪ ॥
ಶಕ್ತಿಯುಕ್ತಿಗಳಿದ್ದು ಫಲವೇನು ಸುಜ್ಞಾನವಿಲ್ಲದೆ ।
ಮುಕ್ತಿದೊರೆಪುದು ಸುಲಭ ತರವೇನು ॥
ರಕ್ತಮಾಂಸದ ದೇಹ ನಶ್ವರ ಭಕ್ತಿಯೇ
ಪರಮಾರ್ಥ ಸಾಧನ ।
ಯುಕ್ತ ಕರ್ಮವ ನೆಸಗಿ ಜೀವನ್ಮುಕ್ತನಾಗುವ
ಪರಿಯ ಕರುಣಿಸು || ೫ ||
ಆರು ವೈರಿಗಳೆನ್ನಮುತ್ತಿಹರೋ | ಗುರುವರನೆ ನಿನ್ನನು,
ತೋರದಂದದಿ ಮರೆವೆ ಗೈದಿಹರೋ |
ದುರುಳ ಬುದ್ಧಿಯ ಪ್ರೇರಿಸಿ, ಬಹುಕ್ರೂರ
ಕರ್ಮಕೆ ಮನವ ಸೆಳೆವರೋ । ಪರಮ ಪುರುಷನೆ
ಕರುಣದಲಿ ನೀನ್ ತರಿದು ರಿಪುಗಳ ಕಾಯ್ವುದೆನ್ನನು॥೬॥
0 ಕಾಮೆಂಟ್‌ಗಳು