*ಚೈತ್ರ ಮಾಸದ ಉಯ್ಯಾಲೆ ಗೌರಿ ಹಾಡು.*
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ|
ಕೋಲು ಶ್ರೀ ಲಕ್ಷ್ಮೀ ವೆಂಕಟನ್ನ ಬಲಗೊಂಬೆ॥ಕೋಲೆ||ಪ॥
ಚೈತ್ರ ಶುದ್ಧ ತ್ರಿತಿಯಾದಿ ಮಿತ್ರೆ ಗೌರಿಯು ತನ್ನ |
ಅರ್ಥಿಯ ತೌರೂರಿಗೆಂದು ಬರುತಾಳೆ ॥| ಕೋಲೆ |
ಅರ್ಥಿಯ ತೌರೂರಿಗೆಂದು ಮುತ್ತಿನ ಅಂದಣವನೇರಿ|
ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ॥ಕೋಲೆ||೧॥
ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಬರುವಾಗ।
ಛತ್ರ ಚಾಮರವ ಪಿಡಿದು ಸೇವಕರು ॥ ಕೋಲೆ ॥
ಛತ್ರ ಚಾಮರವ ಪಿಡಿದು ಭಕ್ತಿಯಿಂದ ಸೇವಕರು |
ಮತ್ತೆ ಬಹು ಪರಾಕವನು ಹೇಳುವರು॥ ಕೋಲೆ||೨॥
ವರುಷ ಪ್ರಾರಂಭದಲ್ಲಿ ಗಿರಿಜೆಯನು ಪೂಜಿಸಲು |
ಸರಸದ ಉಯ್ಯಾಲೆಯಲಿ|ಗೌರಿಯನಿಟ್ಟು||ಕೋಲೆ ॥
ಗಿರಿಯ ಮೇಲೆ ಗೌರಿಯನಿಟ್ಟು|ವರ ಧಾನ್ಯದಪೈರುಬೆಳೆಸಿ |
ಅರಿಷಿಣದೋಕುಳಿ ತುಂಬಿ ಕಳಶವಿಡು|ಕೋಲೆ||೩॥
ಮುದದಿ ಕಳಶ ಕನ್ನಡಿಯ ಪದುಮ ನಯನೆಯರೆಲ್ಲ ಪಿಡಿದು
|ಎದುರುಗೊಂಡು ಗೌರಮ್ಮಗೆ ಕದಲಾರುತಿಯ || ಕೋಲೆ |
ಎದುರುಗೊಂಡು ಗೌರಮ್ಮಗೆ ಕದಲಾರುತಿ ಎತ್ತುವಾಗ।
ಸುದತಿ ಗೌರಮ್ಮ ನಗುತಾಳೆ ॥| ಕೋಲೆ ||೪॥
ಸಿರಿ ವಸಂತ ಕಾಲವಿದು | ಅರಳು ಮಲ್ಲಿಗೆ ವನದಿ | ಹರದಿ
ಗೌರಮ್ಮಗೆ ಅರಮನೆಯು || ಕೋಲೆ | ಅರಮನೆಯ
ಸುತ್ತುಮುತ್ತು | ಹರಿವ ತಿಳಿ ನೀರ ರುರಿ | ಮರಿ ಪಕ್ಷಿ ಸ್ವರವ
ಕೇಳು | ಕೋಲೆ | | ೫ ॥
ಮಲ್ಲಿಗೆ ತೈಲವ ತಂದು | ನಲ್ಲೆ ಗೌರಿಗೆ ಹಚ್ಚೆ |
ಸಲ್ಲಲಿತ ಪನ್ನೀರು ಎರೆಯುವೆನು ॥
ಕೋಲೆ | ಸಲ್ಲಲಿತ ಪನ್ನೀರು ಚೆಲ್ವೆ ಶಂಕರಿಗೆರೆದು |
ಪಾಲ್ಮಡ್ಡಿ ಸುವಾಸಿತ ಧೂಪ ಹಾಕಿ ॥ ಕೋಲೆ || ೬॥
ಪೀತಾಂಬರ ನೆರಿಗೆ ಕಟ್ಟಿ|ಮುತ್ತಿನ ಕಂಚುಕ ತೊಡಿಸಿ |
ರತ್ನ ಕೆತ್ತಿದ ಸರ್ವಾ | ಭರಣವಿಟ್ಟು ॥ ಕೋಲೆ ||
ಹತ್ತು ಬೆರಳಿಗೆ ದಿವ್ಯ ಚಿತ್ರದುಂಗುರವಿಟ್ಟು |
ಮತ್ತೆ ಸರಪಳಿ ಕಟ್ಟಿ ಅಲಂಕಾರ | ಕೋಲೆ||೭॥
ಚಂದ್ರ ಮುರುವು ಚಳ ತುಂಬು|ಛಂದದ ಮುತ್ತಿನ ಓಲೆ |
ಕುಂದಣ ಕೆತ್ತಿದ ಬುಗುಡಿ ಬಾವಲಿಯು | ಕೋಲೆ |
ಸುಂದರಿ ಗೌರಮ್ಮಗೆ ಅಂದದ ಬುಲಾಕು ಮುಖಿರೆ |
ಇಂದುವ ಪೋಲುವ ಮುಖಕೆ ಕುಂಕುಮವು||ಕೋಲೆ||೮॥
ಚಂದ್ರನ್ನ ಪೋಲುವ ಮುಖಕೆ|ಗಂಧ ಕಸ್ತೂರಿ ತಿಲಕ|
ನಂದಿವಾಹನನ ಸತಿಗೆ | ಅಡ್ಡಿಕೆಯು ॥ ಕೋಲೆ ॥
ನಂದಿವಾಹನನ ಸತಿಗೆ | ಚಂದ್ರ ಹಾರ ಕಾಸಿನ ಸರ |
ಸಿಂಧೂರ ಗಮನೆ ಸತಿಗೆ ಸಾಲು ಮುತ್ತಿನಹಾರ||ಕೋಲೆ||೯॥
ಹರಳಿನಡ್ಡಿಕೆ ಕಂಠಿ|ಸರಿಗೆ, ಸಮಜೋಡು ತಾಯ್ತ |
ಸರವು ನವರತ್ನಪಟ್ಟಿ | ಒಡ್ಡ್ಯಾಣವು || ಕೋಲೆ ||
ಹರಡಿ ಹಸ್ತ ಕಡಗ ನಾಗಮುರುಗಿ ವಂಕಿ
ಪೌಂಛ ಕಡಗ |
ದ್ವಾರ ಕಡಗ ಗೀರುಬಳೆ |ತೋಡ್ಯವಿಟ್ಟು ಕೋಲೆ||೧0||
ಘಿಲ್ಲು ಘಿಲ್ಲು ಗೆಜ್ಜೆ ಪೆಂಡೆ | ಲುಲ್ಲುರುಳಿ ಪೈರುಣಿ |
ಪಿಲ್ಲೆ ಕಾಲುಂಗುರವು ಮೆಂಟಕಿಯು ॥ ಕೋಲೆ |
ಪಿಲ್ಲೆ ಕಾಲುಂಗುರದ ಚೆಲ್ವ ಪಾದಗಳಿಗೆ ನಾನು |
ಉಲ್ಲಾಸದಿ ಚಾವಡಿಯ ಬರೆಯುವೆನು||ಕೋಲೆ||೧೧॥
ಅರಿಷಿಣ ಚಾವಡಿಯಲ್ಲಿ ಹರುಷದಿ ರೇಖೆಯ ತಿದ್ದಿ |
ಅರಸಿ ಶಂಕರಿಗೀಗ ಎರಗುವೆನು ॥ ಕೋಲೆ |
ಹೆರಳು ಬಂಗಾರ ಕಟ್ಟಿ | ಹರಳಿನ ರಾಗಟೆ ಹಾಕಿ |
ತಿರಗಣಿಯ ಹರಳು ಹೂವು ಅರಳೆಲೆಯು||ಕೋಲೆ||೧೨॥
ತಿರಗಣಿಯ ಹರಳು ಹೂವು ಅರಳು ಮಲ್ಲಿಗೆ ಜಾಜಿ |
ಸುರಗಿ ಸೇವಂತಿಗೆಯ ದಂಡೆ ಮುಡಿಸಿ | ಕೋಲೆ |
ಸುರಗಿ ಸೇವಂತಿಗೆಯು | ಸುರ ಪಾರಿಜಾತದ ಪುಷ್ಪ |
ಅರಳಿದ ಚಂಪಕದ ಮಾಲೆ ಸೂಸುವವು||ಕೋಲೆ||೧೩||
ಹೆಸರು ಕಡಲೆಬೇಳೆಯ ಹಸಿಯ ಕೋಸಂಬರಿಯು |
ಹಸನಾದ ಮಜ್ಜಿಗೆ ಪಾನಕವು ಮಾವು ॥ ಕೋಲೆ ॥
ಹಸನಾದ ಮಜ್ಜಿಗೆ ಪಾನಕ ಮಾವಿನ್ನಣ್ಣು ವಿಳ್ಯ |
ಕುಸುಮಗಂಧಿ ಗೌರಮ್ಮಗೆ ನೈವೇದ್ಯವು||ಕೋಲೆ||೧೪||
ಪಾನಕ ಕೋಸಂಬರಿ ಮಜ್ಜಿಗೆ|ಜಾಣೆ ತ್ರಿಪುರ ಸುಂದರಿಗೆ।
ಎಲೆ ಅಡಿಕೆಯ ತಾಂಬೂಲ|ಫಲವಿಡುವೆ||ಕೋಲೆ ॥
ಜೇನುತುಪ್ಪ ಮಾವಿನ ಫಲವಿಟ್ಟು ಜಾನಕಿ। ಕಾಂತನ
ಮನದಲ್ಲಿ ನೆನೆಯುವೆನು ॥ ಕೋಲೆ||೧೫||
ಸ್ವಚ್ಚವಾದ ಧಾನ್ಯ ತುಂಬಿ|ಬಿಚ್ಚೋಲೆ ಕರಿಮಣಿಗಳ ಹಾಕಿ
ಹಚ್ಚ ಹಸುರಿನ ವಸ್ತ್ರಗಳ ಇರಿಸಿ | ಕೋಲೆ |
ಹಚ್ಚ ಹಸುರಿನ ವಸ್ತ್ರಗಳ ಇರಿಸಿ
ಮುಚ್ಚು ಮರದ ಬಾಗಿಣಗಳ ಕೊಡುವೆನು||ಕೋಲೆ॥೧೬॥
ಕರಿಮಣಿ ಬಿಚ್ಚೋಲೆ ಕನ್ನಡಿ|ಸರ್ವ ಧಾನ್ಯಗಳ ತುಂಬಿ।
ಮರದ ಬಾಗಿಣ ವಸ್ತ್ರ ದಕ್ಷಿಣೆಯು ॥ ಕೋಲೆ |
ಕರವ ಪಿಡಿಯೆ ತಾಯಿ ಗೌರಿ|ಹರುಷದಿ ಬಾಗಿಣ ಕೊಡುವೆ|
ಸ್ಥಿರವಾಗಿ ಮುತ್ತೈದೆ ತನವ | ಎನಗೆ ನೀಡು||ಕೋಲೆ|| ೧೭||
ಶುಕ್ರ ಮಂಗಳವಾರಗಳಲ್ಲಿ|ಸುವಾಸಿನಿಯರ ಕರೆದು |
ಅಕ್ಕರೆಯಿಂದ ಸುವಾಸಿನಿಯರಿಗೆ|ಸಕ್ಕರೆ ಕ್ಷೀರ | ಕೋಲೆ ||
ಸಕ್ಕರೆ ಕ್ಷೀರ ಪಕ್ವಾನ್ನವನು ಉಣಿಸಿ ।
ಅಕ್ಕ ಪಾರ್ವತಿ ನಿನಗೆ ಅರ್ಪಿಸುವೆನು||ಕೋಲೆ||೧೮॥
ತೂಗುಮಣೆ ಮಂಚದಲ್ಲಿ ಭೋಗದ ಹಾಸಿಗೆ ಹಾಸಿ |
ನಾಗಸಂಪಿಗೆ ಹೂವು ವರಗನಿಟ್ಟು॥ ಕೋಲೆ॥
ನಾಗಸಂಪಿಗೆ ಒರಗು ಭೋಗಿ ಭೂಷಣನ ಕೂಡಿ ।
ಭೋಗಿಭೂಷಣ ಗೌರಿಯ ತೂಗುವೆನು||ಕೋಲೆ||೧೯॥
ತಿಂಗಳು ಮೀರಲು ಅಂಗನೆ ನಿನ್ನಯ|ಹೊಂಗಳಶವ॥
ಕೊಂತಿಗಳ ಸಮೇತ|ಮಂಗಳ ಜಲದಿ ವಿಸರ್ಜಿಸಿ|ಕೋಲೆ||
ಮಂಗಳ ಜಲದಿ ವಿಸರ್ಜಿಸಿ | ಶ್ರೀಹರಿ ರಂಗ |
ನಾಗಶಯನನಿಗೆ ಅರ್ಪಿಸುವೆನು||ಕೋಲೆ||೨೦||
ಮೂರು ತದಿಗೆಯ ಈ ವೃತ|ಭಾರಿ ಭಕ್ತಿಯಿಂದ ಗೈಯೆ |
ಮಾರ ಹರನ ಅರ್ಧಾಂಗಿ ಒಲಿಯುವಳು ॥ ಕೋಲೆ |
ಮೂರನೆಯ ಅಕ್ಷಯತದಿಗೆ|ಭಾರಿ ಔತಣದ ಊಟ |
ಗೌರಿ ಹೆಸರಿನಲ್ಲಿ ಮುತ್ತೆದೆಗಿಡು|ಕೋಲೆ||೨೧॥
ಹರಿಯೇ ಸರ್ವೋತ್ತಮನು|ಸಿರಿಯೇ ಆತನ ಸತಿ |
ಭಾರತಿರಮಣ ಮುಖ್ಯಪ್ರಾಣ ಗುರುವು||ಕೋಲೆ ॥
ತಾರತಮ್ಯ ಪಂಚಭೇದ|ಮಾರುತನ ಮತದ ಜ್ಞಾನ |
ಸೂರಿ ಜನ ಸಂಗವಿತ್ತು ಸಲಹೆನ್ನ||ಕೋಲೆ ||೨೨॥
ಪತಿ, ಪುತ್ರ, ಬಂಧು, ಬಳಗ | ಹಿತವಾಗಿಹ ಭೋಗ ಭಾಗ್ಯ |
ರತಿ ಪತಿ ಪಿತನ ಭಕ್ತಿ| ಮತಿಯ ಕೇಳು ॥ ಕೋಲೆ |
ಹಿತದಿ ಹರನ ಅಂಕದಲ್ಲಿ ಸ್ಥಿತಳಾಗಿಹ ಗೌರಿ ಕಳಶ |
ಸತಿಯರಿಂದ ಒಡಗೂಡಿ ವನದಿ ಇಳುಹು||ಕೋಲೆ||೨೩॥
ವರುಷಕ್ಕೊಮ್ಮೆ ಕರೆದು ಬಲು|ಹರುಷದಿ ಪೂಜಿಸುತಲಿ |
ಹರನ ರಾಣಿಯಲ್ಲಿರುವ ಹರಿಗರ್ಪಿಸು|ಕೋಲೆ ॥
ಧರಣಿ ಜಾನಕಿ ಪತಿ|ಮಾರುತಿ ವಲ್ಲಭ ರಾಮ |
ಕರುಣಿಸಿ ನಾಗೇಶ ಶಯನ ಪೊರೆಯುವನು||ಕೋಲೆ||೨೪||
ಶ್ರೀಕೃಷ್ಣಾರ್ಪಣಮಸ್ತು.
0 ಕಾಮೆಂಟ್‌ಗಳು