॥ ಶ್ರೀ ಗಣೇಶ ಸ್ತುತಿ ||
ಏಕದಂತ ವಕ್ರತುಂಡ ವಿಘ್ನರಾಜನೇ
ಮೊದಲು ನಿನ್ನ ಭಜಿಸಿದವಗೆ ಕಾರ್ಯಸಾಧನೆ ॥ ಪ ॥
ಶುತಿಯು “ತತ್ವಮಸಿ” ಯು ನೀನು ನೀನೆ ಕರ್ತೃವು
ನೀನೆ ಲೋಕ ಸಂರಕ್ಷಕ ನೀನೆ ಸಂಹಾರಕ |
ನೀನು ನಿತ್ಯನಾತ್ಮ ನೀನು ನೀನೆ ಬ್ರಹ್ಮವೂ
ಜ್ಞಾನಮಯನು ನೀನೆ ದೇವ ನೀನೆ ಚಿನ್ಮಯ||೧||
ಭೂಮಿ ನೀನು ಜಲವು ನೀನು ನೀನೆ ಅಗ್ನಿ ವಾಯುವು
ಅಂತರಿಕ್ಷವೆಲ್ಲ ನೀನೆ ವೇದರೂಪನು ।
ಮೂರು ಗುಣವ ಮೀರಿದವನು ಮೂರುದೇಹವಿಲ್ಲದವನು
ಕಾಲ ಮೂರ ದಾಟಿದವನು ಶಕ್ತಿರೂಪನು ॥೨||
ಬ್ರಹ್ಮ ನೀನು ವಿಷ್ಣು ನೀನು ನೀನೆ ರುದ್ರನೂ
ಇಂದ್ರ ಅಗ್ನಿ ವಾಯು ಸೂರ್ಯ ನೀನೆ ಚಂದ್ರನೂ ।
ಪಾಶಾಂಕುಶಧಾರಿ ದೇವ ವರದಾಭಯ ಹಸ್ತನೇ
ಇಲಿಯನೇರಿ ಮೆರೆವ ದೊರೆಯೆ ಮೂಷಿಕಧ್ವಜ ||೩||
ಲಂಬೋದರ ರಕ್ತವಸನ ಶೂರ್ಪಕರ್ಣನೇ
ರಕ್ತ ಗಂಧಲಿಪ್ತ ದೇಹ ರಕ್ತ ಕುಸುಮ ಪೂಜಿತ ।
ವ್ರಾತಪತಿಯೆ ಪ್ರಮಥ ಪತಿಯೆ ನಮಿಪೆ ಗಣಪತಿ
ನುತಿಪೆ ಶಿವನ ಸುತನೆ ನಿನ್ನ ವರದಮೂರ್ತಿಯೇ||೪||
ನಿನ್ನ ನಾಮ ಪಠಿಸಲವಗೆ ವಿಘ್ನವಿಲ್ಲವೋ
ನಿನ್ನ ಹಾಸ್ಯಗೈದ ಶಶಿಗೆ ಕ್ಷಯವು ಬಂದುದು
ನಮಿಸೆ ನಿನ್ನ ಸಿದ್ಧಿಬುದ್ಧಿ ತಾನೆ ದೊರೆವುದೂ
ಅದುವೆ ನೀ ಚಿದಂಬರೇಶ ಮನದೊಳಿರುವುದೂ ||೫||
0 ಕಾಮೆಂಟ್‌ಗಳು