ಸಿರಿರಮಣ ತವ ಚರಣ ದೊರಕುವುದು ಹ್ಯಾಂಗಿನ್ನು - Siriramana Tava Charana Dorakuvudu Hyanginnu

|| ಹರಿ ಭಜನೆ ||


ಸಿರಿರಮಣ ತವ ಚರಣ ದೊರಕುವುದು ಹ್ಯಾಂಗಿನ್ನು

ಪರಮ ಪಾಪಿಷ್ಠ ನಾನು || ಪ |। 

ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ।

ನರಕಕ್ಕೆ ಗುರಿಯಾದೆನೋ । ಹರಿಯೇ ||ಅ.ಪ|| 


ಕೆರೆ ಭಾವಿ ದೇವ ಮಂದಿರಗಳನು ಕೆಡವಿ

ನಾ ಹಿರಿದಾಗಿ ಮನೆ ಕಟ್ಟಿದೆ ।

ನೆರೆನಡೆವ ಮಾರ್ಗದಾ ಅರವಟ್ಟಿಗೆಗಳನು

ಥರಥರದಿ ಬಿಚ್ಚಿ ತೆಗೆದೆ ।

ಪರಮ ಸಂಭ್ರಮದಿಂದ ಅರಳೆಯಮರ

ಕಡಿಸೆ ಕೊರೆಸಿ ಬಾಗಿಲ ಮಾಡಿದೆ ॥

ವರಮಂದಿರವ ಮುಗಿಸಿ ಹರುಷ ಚಿತ್ರವ ತೆಗೆಸಿ

ಪರಿಪರಿಯ ಸೌಖ್ಯ ಸುರಿದೆ ಮೆರೆದೆ  ||೧||


ಹೊಸ ಮನೆಯ ಕಂಡು ಬಲು ಹಸಿದು

ಭೂಸುರರು ಬರೆ ಕೊಸರಿ ಹಾಕುತ ದಬ್ಬುತಾ | 

ಶಶಿಮುಖಿಯೇ ಬಾರೆಂದು ಅಸುವನೆ ಬಣ್ಣಿಸುತ

ಹಸನಾಗಿ ಅವಳೊಲಿಯುತ

ದಶಮಿ ಏಕಾದಶಿ ದ್ವಾದಶಿ ದಿನತ್ರಯದಿ

ಅಶನವೆರಡು ಹೊತ್ತುಣ್ಣುತಾ |

ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು

ಕುಸುಮಗಂಧಿಯ ರಮಿಸುತಾ । ಸತತಾ || ೨॥ 


ಸ್ನಾನ ಸಂಧ್ಯಾನ ಅತಿಮೌನ ಗಾಯತ್ರಿಜಪ

ಭಾನುಗರ್ಘ್ಯವನು ಕೊಡದೆ ।

ಶ್ರೀನಿವಾಸನೆ ನಿನ್ನ ಜ್ಞಾನಪೂರ್ವಕ ಪೂಜೆ

ನಾನೊಂದು ಕ್ಷಣ ಮಾಡದೆ ।

ಬೇನೆ ಬಂದಂತಾಗಿ ಹೀನ ಸಕೇಶಿಯ ಕೈಲಿ

ನಾನಾ ವಿಧಾನ್ನ ಉಂಡೆ । 

ಜೀನತ್ವದಲಿ ದುಡ್ಡು ದಾನ ಧರ್ಮವ ಕೊಡದೆ

ಶ್ವಾನನಂದದಿ ಚರಿಸಿದೆ । ಬರಿದೆ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು