|| ರಾಮ ಸ್ತುತಿ ||
ಅಂಗಳದೊಳು ರಾಮನಾಡಿದ
ಚಂದ್ರ ಬೇಕೆಂದು ತಾ ಹಠ ಮಾಡಿದ || ಪ ||
ಪುಟ್ಟ ಹೆಜ್ಜೆಯನಿಟ್ಟು ನಡೆದಾಡಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ತಾಯಿ ಕಡೆಗೊಮ್ಮೆ ಕೈ ಮಾಡಿ ತೋರಿದ
ಸಣ್ಣ ಕೈ ಮಾಡಿ ತಾ ಎಂದು ಬೇಡಿದ || ೧ ||
ಚಿನ್ನಿ ಕೋಲು ಚೆಂಡು ಬುಗುರಿ ಆಟವ
ಬೇಡ ಬೇಡ ಎನ್ನುತ ಬಿಸಾಡಿದ
ತಾಯಿ ಕೌಸಲ್ಯ ಕಳವಳಗೊಂಡಳು
ಕಂದ ಅಂಜಿದ ಎನ್ನುತ್ತಿದ್ದಳು || ೨ ||
ಕಂದ ಅಳುವ ಧ್ವನಿಯ ಕೇಳಿ ರಾಜನು
ಮಂತ್ರಿ ಸಹಿತಾಗಿ ಧಾವಿಸಿ ಬಂದನು
ನಿಲುವ ಗನ್ನಡಿಯನ್ನೇ ತಂದಿರಿಸಿದ
ರಾಮನೆತ್ತಿಕೊಂಡು ಮುದ್ದಾಡಿದ || ೩ ||
ದರ್ಪಣದೊಳು ರಾಮ ನೋಡಿದ
ಚಂದ್ರ ಸಿಕ್ಕನೆನುತ ಕುಣಿದಾಡಿದ
ಈ ಸಂಭ್ರಮ ಆದಿ ಕೇಶವ ನೋಡಿದ
ರಘು ವಂಶವನೆ ಕೊಂಡಾಡಿದ || ೪ ||

0 ಕಾಮೆಂಟ್‌ಗಳು