|| ದೇವ ಹಿರಿ ಗುರುರಾಯ ||
ದೇವ! ಹಿರಿಗುರುರಾಯ। ತಿಳಿಯದೈ ನಿನ ಮಾಯ ।
ಸೆಳೆಯದಿರಲೆನ್ನ ಮನ ಜಗದ ವೈಭವವು ॥ಪ॥
ಭಾವ ಬಲಿಯಲಿ ಧ್ಯಾನದಲಿ ಬೆರೆಯಲೆನ್ನ ಮನ ।
ದೇವತೋರಲಿ ತನ್ನ ದಿವ್ಯ ವೈಭವವ ॥ ಅ.ಪ. ||
ನಿನ್ನ ನಾಮವ ಮನವು ನಿತ್ಯ ನೆನೆಯುತಲಿರಲಿ ।
ಮೈಯು ಸವೆಯಲಿ ನಿನ್ನ ಸೇವೆಯಲಿ ॥
ಮತಿಯು ಹೊಳೆಯಲಿ ನಾಥ, ತೊಲಗಲೆನ್ನಯ ಮಾತು ।
ಕೃತಿಯು ಬೆಳಗಲಿ ನಿನ್ನ ಬೆಳಕಿನಲ್ಲಿ ॥೧॥
ನಿನ್ನ ಒಲವಿನ ಸೆಲೆಯು ತೊರೆದು ಸುಧೆಯನು ಸುರಿದು ।
ಸಂತತೆನ್ನನು ಪೊರೆದು ಬೆಳೆಸುತಿರಲಿ ॥
ನಿನ್ನ ಕರುಣವೆ ಅನ್ನ ನಿನ್ನ ಕರುಣವೆ ನೀರು ।
ನಿನ್ನ ಕರುಣವೆ ಎನ್ನ ಉಸಿರಾಗಲಿ ॥೨॥
ಒಡನೆ ಆಡಿದ ಮಾತು ಮಿಂಜಿನೈಸಿರಿ ತಳೆದು ।
ಸಂಚರಿಸಿ ಬೆಳಕು ಬಲ ನೀಡುತಿರಲಿ ॥
ಹೃದಯದಾಳದ ನುಡಿಯು ಗುಡುಗಿನಾರ್ಭಟದಿಂದ ।
ಗುಡುಗಿ ಎದೆಯಿಂ ದೈನ್ಯದೂಡುತಿರಲಿ ॥೩॥

0 ಕಾಮೆಂಟ್‌ಗಳು