||ಹರಿನಾಮ ಸ್ತುತಿ ||
ರಾಗ : ಮಧ್ಯಮಾವತಿ
ತಾಳ : ಆದಿ
ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ
ನಾಮದ ಬಲವೊಂದಿದ್ದರೆ ಸಾಕೊ||ಪ॥
ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿ ಮೂಲನೆಂಬ ನಾಮವೆ ಕಾಯ್ತೋ |1|
ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನರಹರಿಯೆಂಬ ನಾಮವೆ ಕಾಯ್ತೊ ॥ 2॥
ಸಭೆಯಲಿ ಬಾಲೆಯ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೊ ||3||
ಯಮನ ಧೂತರು ಬಂದು ಅಜಮಿಳನೆಳೆವಾಗ
ನಾರಾಯಣನೆಂಬ ನಾಮವೆ ಕಾಯ್ತೊ ॥ 4 ||
ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮವೆಂಬ ನಾಮವೆ ಕಾಯ್ತೊ ॥| 5॥
ಹಸುಳೆ ಆ ಧೃವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೆ ಕಾಯ್ತೊ ||6||
ನಿನ್ನ ನಾಮಕೆ ಸರಿ ಕಾಣೆನು ಜಗದೊಳು
ಘನ ಮಹಿಮ ಸಿರಿ ಪುರಂದರವಿಠಲ ॥ 7॥

0 ಕಾಮೆಂಟ್‌ಗಳು