ಶ್ರೀ ಬಿಂದುಮಾಧವ ಸ್ತುತಿ - ಹೇ ದಯಾಘನ ಸ್ವಾಮಿ ಬಿಂದುವೆ, He Dayaaghana Swami Binduve

|| ಶ್ರೀ ಬಿಂದುಮಾಧವ ಸ್ತುತಿ ||

ರಚನೆ : ಧ್ರುವಕುಮಾರ್ ಅವಧಾನಿ (ಧೃವಣ್ಣ )

kannadabhajanlyrics.blogspot.com
kannadabhajanlyrics.blogspot.com


ಹೇ ದಯಾಘನ ಸ್ವಾಮಿ ಬಿಂದುವೆ

ನಮಗೆ ಬೇಕಿದೆ ನಿನ್ನ ದರ್ಶನ

ಹನುಮ ರೂಪನೆ ಗುರುವರೇಣ್ಯನೆ

ಕಷ್ಟ ಕಳೆಯಲು ನೀಡು ದರ್ಶನ


ನಾವು ಋಣಿಗಳು ಲಕ್ಷ್ಮೀ ಮಾತೆಗೆ

ಭರತ ಭೂಮಿಗೆ ನಿನ್ನನಿತ್ತಳು

ಭಕುತ ಸಾಗರ ನಿನ್ನ ನೋಡಲು

ಕಾದು ನಿಂತಿರೆ ಧನ್ಯ ಭಾವದಿ


ಮುಗುದ ಭಕುತಗೆ ಒಂದು ನಿಮಿಷದ

ದೃಷ್ಟಿ ಬೇಕಿದೆ ಪೂತರಾಗಲು

ಹೇ ದಯಾಘನ ಸ್ವಾಮಿ ಬಿಂದುವೆ

ಕಷ್ಟ ಕಳೆಯಲು ನೀಡು ದರ್ಶನ


ನದಿಯ ಮೀನಿಗೆ ಚಳಿಯು ಉಂಟೇ?

ಉರಿವ ಬೆಂಕಿಗೆ ಶಾಖ ತಗುಲಿತೇ?

ಉದಯ ಸೂರ್ಯಗೆ ದೀಪ ದರುಶನ

ಜಗದ ಮಾಯೆಗೆ ನಿನ್ನ ನಾಟಕ


ಸತ್ಯ ಚರಿತನೆ ಕಳಂಕ ರಹಿತನೆ

ನಿತ್ಯ ಶುಧ್ಧನೆ ನಿನಗೆ ಸ್ನಾನವೇ?

ಹೇ ದಯಾಘನ ಸ್ವಾಮಿ ಬಿಂದುವೆ

ಕಷ್ಟ ಕಳೆಯಲು ನೀಡು ದರ್ಶನ


ಜಗದ ಮನುಜರ ಮನವ ಅರಿತು ನೀ

ಶ್ವೇತ ವಸ್ತ್ರವ ಧರಿಸಿ ನಿಂತೆಯಾ?

ರಕ್ತ ಚಂದನ ಎಂಥ ಭೂಷಣ

ಭಸ್ಮ ಭೂಷಿತ ಭುವನ ಸುಂದರ


ಹಣೆಗೆ ಕುಂಕುಮ ನೀನು ಧರಿಸುತ

ಹಣೆಯ ಬರಹವ ನೀನೆ ಬರೆಯುವೆ

ಹೇ ದಯಾಘನ ಸ್ವಾಮಿ ಬಿಂದುವೆ

ಕಷ್ಟ ಕಳೆಯಲು ನೀಡು ದರ್ಶನ


ಶರಧಿ ಲಂಘಿಪ ಮುದ್ದು ಹನುಮನೆ

ಭುವಿಯ ಕ್ರಮಿಸಲು ವಾಯು ಯಾನವೇ

ಜನರ ಕನಸನು ಅರಿವ ಗುರುವಿಗೆ

ನೊಂದ ಭಕುತರ ದೂರು ಕೇಳದೇ?


ಕಪಟ ಆಟದ ಸೂತ್ರದಾರನೆ

ಜಗದ ಮಾಯೆಗೆ ನಿನ್ನ ಪಾತ್ರವು

ಹೇ ದಯಾಘನ ಸ್ವಾಮಿ ಬಿಂದುವೆ

ಕಷ್ಟ ಕಳೆಯಲು ನೀಡು ದರ್ಶನ


ಯೋಗಿ ರಾಜನೆ ಪರಮ ಹಂಸನೆ

ದೂರ ಓಡಿಸು ವಿಷಯ ವಾಸನೆ

ರಾಮ ನಾಮದಿ ನಿರುತ ಪ್ರೇಮವ

ಮನದಿ ನಿಲ್ಲಿಸು ಸರ್ವ ಶಕ್ತನೆ


ಪತಿತ ಪಾವನ ಪರಮ ಪುರುಷನೆ

ಹನುಮ ರೂಪನೆ ರಾಮ ದಾಸನೆ

ಹೇ ದಯಾಘನ ಸ್ವಾಮಿ ಬಿಂದುವೆ

ಕಷ್ಟ ಕಳೆಯಲು ನೀಡು ದರ್ಶನ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು