ತತ್ವ ವಿಚಾರ ಪ್ರಕರಣ - ಬರಿದೇ ನಾ ಶಿವ ನೆಂದೊಡನವ ಶಿವನಲ್ಲ, Baride Na Shiva Nendodanava

|| ತತ್ವ ವಿಚಾರ ಪ್ರಕರಣ ||




ಬರಿದೇ ನಾ ಶಿವ ನೆಂದೊಡನವ ಶಿವನಲ್ಲ |

ಸ್ಥಿರಮುಕ್ತಿ ಸುಖವ ಸದ್ಗುರು ಪುತ್ರ ಬಲ್ಲ ॥ಪಲ್ಲವಿ॥ 


ಮರವೆ ಸಂಶಯಗಳೆಂಬುದು ಕೆಡಲಿಲ್ಲ |

ಪರಮನ ನೆಲೆ ಗೊತ್ತು ಗುರಿ ಕಾಣಲಿಲ್ಲ |

ದುರಿತ ಪುಣ್ಯಗಳ ಶಬ್ದಗಳಡಗಿಲ್ಲ |

ಕರಣ ಧರ್ಮಗಳಾವು | ದದು ವೇದ್ಯವಿಲ್ಲಾ ||೧||


ಕಾಮಾದಿಗಳು ಹಮ್ಮಿನೊಳು ಹೊಂದಲಿಲ್ಲ |

ಹೋಮ ನೇಮಗಳೊಂದು ಬಯಲಾಗಲಿಲ್ಲ |

ನಾಮರೂಪಗಳಲ್ಲಿ ಪುಸಿ ತೋರಲಿಲ್ಲ |

ಪ್ರೇಮಾಸ್ತಿ ಭಾತಿ ತನ್ನೊಳು ಹೊಂದಲಿಲ್ಲಾ ||೨||


ಜರೆ ಮೃತಿ ಜನನ ದೇಹದೊಳಡಗಿಲ್ಲ |

ಹರಣಕ್ಕೆ ಕ್ಷುಧೆ ತೃಷ್ಣೆಗಳ ಕೊಡಲಿಲ್ಲಾ |

ಕರಣದೊಳ್‌ ಸುಖ ದುಃಖಂಗಳ ನೀಡಲಿಲ್ಲಾ |

ಅರಿವ ಸಾಕ್ಷಿತ್ವ ತನೊಳು ಕೂಡಲಿಲ್ಲಾ ||೩||


ಮನದ ಮೋಹವು ಮನಸಿನದಾಗಲಿಲ್ಲ।

ತನು ಧರ್ಮವೆನ್ನೆದೆಂಬುದು ಕೆಡಲಿಲ್ಲ|

ಕನಸು ಜಾಗರವೆರಡೊಂದಾಗಲಿಲ್ಲ |

ಚಿನುಮಯನಾಗುತ ತಾ ನಿಲ್ಲಲಿಲ್ಲಾ ||೪||


ನಶ್ವರ ಮಾಯಾ ಮೋಹವು ಕೆಡಲಿಲ್ಲ।

ದೃಶ್ಯವೆಂಬುದು ಪೋಗಿದೃಕ್ಕಾಗಲಿಲ್ಲಾ।

ದೃಶ್ಯಾದೃಕ್ಕುಗಳ ಮೂಲವ ಕಾಣಲಿಲ್ಲಾ |

ವಿಶ್ವಾಕಾರತ್ವ ತನ್ನೊಳು ತೋರಲಿಲ್ಲಾ ||೫||


ಎಲ್ಲಾ ಒಂದೆಂಬುದೊಳಗೆ ನಿಲ್ಲಲಿಲ್ಲಾ ।

ಇಲ್ಲಲ್ಲಿಗೆಳೆವೆ ಭ್ರಾಂತಿಯ ಕೊಲ್ಲಲ್ಲಿಲ್ಲಾ |

ಎಲ್ಲೆಲ್ಲೆಯುಂ ತಾನೇ ತಾನಾಗಲಿಲ್ಲ |

ಸಲ್ಲಲಿತಾನಂದದೊಳು ಕೂಡಲಿಲ್ಲಾ ||೬||


ಪರಮ ನಾನೆಂಬರಿವನು ಮರೆತಿಲ್ಲ|

ಮರವೆಗಾಶ್ರಯವಾವುದದು ತೋರಲಿಲ್ಲ।

ಪರವೆಂಬ ನುಡಿಬೆಂದು ಬೂದಿಯಾಗಲಿಲ್ಲಾ। 

ಗುರುಶಂಕರನೊಳೈಕ್ಯ ತಾನಾಗಲಿಲ್ಲ॥ಬರಿದೇ ನಾ ಶಿವ।|೭



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು