|| ಜಯ ಗುರು ಶಂಕರ ಭಗವನ್ ಸ್ತುತಿ ||
ಗತಿತೋರದ ಪರಿಪೂರ್ಣ ಪರಾತ್ಮಗೆ |
ಕ್ಲಿತಿಯೊಳಗಾವಾಹನೆಯುಂಟೇ ।
ಮಿತಿಯಿಲ್ಲದ ಬ್ರಹ್ಮಾಂಡಾಧಾರನಿ ।
ಗತಿಶಯಮಾದಾಸನವುಂಟೇ || ೧ ||
ನಿರುಪಮ ನಿರ್ಗುಣ ನಿತ್ಯ ನಿರಂಜನ |
ನಿರವಧಿಕನಿಗಾಚಮನುಂಟೇ।
ಕರಮುರಿ ಇಲ್ಲದ ಖಂಡಾಕಾರಗೆ |
ಬರಿದೆಸಗುವ ಪಾದ್ಯಗಳುಂಟೇ || ೨ ||
ನಿತ್ಯ ಶುದ್ಧವಾಗಿಹ ಸದ್ರೂಪಗೆ।
ಮರ್ತ್ಯ ಸ್ನಾನದ ಬೆಡಗುಂಟೇ।
ಮತ್ತೀ ಬ್ರಹ್ಮಾಂಡಾಳಿಯನುದರದಿ।
ಪೊತ್ತಗೆ ವಸ್ತ್ರಗಳಿಡಲುಂಟೇ || ೩ ||
ಸಲೆ ನಿರ್ಲೇಪಾತ್ಮಕ ಚಿದ್ರೂಪಗೆ |
ಬಳಿಯುವ ಗಂಧಾದಿಗಳುಂಟೇ।
ಮಲವಿಲ್ಲದ ಶಬ್ದಾತೀತನಿಗಿಂ।
ನಿಳೆಯೊಳಗಕ್ಷತೆ ಇಡಲುಂಟೇ ೪
ಆಲಂಬನೆಗೆಡೆಯಿಲ್ಲದ ಪರಮಗೆ।
ಜೋಲಾಡುವ ಸೂತ್ರಗಳುಂಟೇ।
ಮೂಲಾಧಾರಗಳಿಲ್ಲದ ಮೂರ್ತಿಗೆ |
ಮೇಲಾದಾಭರಣಗಳುಂಟೇ || ೫ ||
ರೂಪು ನಾಮವಿಲ್ಲದ ಪರಮಾತ್ಮಗೆ ।
ಧೂಪ ದೀಪಗಳ ಬೆಳಕುಂಟೇ ।
ಶ್ರೀ ಪರಚಿದ್ಘನ ನಿತ್ಯ ತೃಪ್ತಸ ।
ದ್ರೂಪಗೆ ನೈವೇದ್ಯಗಳುಂಟೇ ||೬ ||
ಸಾರ ಪರಂಜ್ಯೋತಿರ್ಮಯನಿದಿರೊಳು |
ನೀರಾಜನ ಬೆಳಗುವುದುಂಟೇ ।
ಪಾರ ರಹಿತ ಪರಿಪೂರ್ಣಾತ್ಮಕನೊಳು।
ಬೇರೆ ಪ್ರದಕ್ಷಿಣೆಗೆಡೆಯುಂಟೇ || ೭ ||
ಅದ್ವಯನೆನೆಸಿದ ಚಿತ್ತಗೆ ನೆಲದೊಳು |
ಬಿದ್ದೆರಗುವ ವಂದನೆಯುಂಟೇ ।
ವೇದಗಳಿಗೆ ಗೋಚರಿಸಿದ ಮೂರ್ತಿಗೆ |
ಭೇದದ ನುಡಿಗಾಸ್ಪದವುಂಟೇ || ೮ ||
ಹೊರವಳಗೆಲ್ಲಿಯು ಎಡೆಯಿಲ್ಲದೆ ತುಂ।
ಬಿರುವನಿದ್ವಾಸನೆಯುಂಟೇ ।
ಗುರುಶಂಕರನಡಿಗಳ ಪಿಡಿದವರಿಗೆ |
ಮರಣ ಜನ್ಮಗಳ ಭಯವುಂಟೇ || ೯ ||
॥ಗತಿ ತೋರದ।|
0 ಕಾಮೆಂಟ್‌ಗಳು